ಕಂದಕಕ್ಕೆ ಬಿದ್ದ ವಾಹನ | ಬೀಡಿ ಎಲೆ ಸಂಗ್ರಹಿಸುವ 18 ಮಂದಿ ಕಾರ್ಮಿಕರ ಮೃತ್ಯು
Update: 2024-05-20 16:30 GMT
ರಾಯಪುರ : ಚತ್ತೀಸ್ ಗಡದ ಕಬೀರ್ಧಾಮ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ತೆಂಡು ಎಲೆಗಳನ್ನು (ಬೀಡಿ ಎಲೆ) ಸಂಗ್ರಹಿಸಿದ ಬಳಿಕ ತಮ್ಮ ಹಳ್ಳಿಗೆ ಹಿಂತಿರುಗುತ್ತಿದ್ದ ಕಾರ್ಮಿಕರು ಪ್ರಯಾಣಿಸುತ್ತಿದ್ದ ವಾಹನವೊಂದು ಕಂದಕಕ್ಕೆ ಬಿದ್ದು 18 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಬಹುತೇಕ ಮಂದಿ ಮಹಿಳೆಯರೆಂದು ತಿಳಿದುಬಂದಿದೆ.
ಕಾರ್ಮಿಕರು ಪ್ರಯಾಣಿಸುತ್ತಿದ್ದ ಮಿನಿ ಗೂಡ್ಸ್ ವಾಹನವು ರಸ್ತೆಯಿಂದ ಜಾರಿ, ಕಂದಕಕ್ಕೆ ಬಿದ್ದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ದುರಂತದಲ್ಲಿ ಇತರ ನಾಲ್ವರು ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಕ್ಡೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಹಪಾನಿ ಗ್ರಾಮ ಸಮೀಪ ಈ ಘಟನೆ ನಡೆದಿರುವುದಾಗಿ ಪೊಲೀಸ್ ಅಧೀಕ್ಷಕ ಅಬಿಷೇಕ್ ಪಲ್ಲವ್ ತಿಳಿಸಿದ್ದಾರೆ.
ಮೃತ ಕಾರ್ಮಿಕರು ಜೀವನೋಪಾಯಕ್ಕಾಗಿ ಬೀಡಿ ತಯಾರಿಕೆಗೆ ಬಳಸುವ ತೆಂಡು ಎಲೆಗಳನ್ನು ಸಂಗ್ರಹಿಸುವ ಕೆಲಸವನ್ನು ನಿರ್ವಹಿಸುತ್ತಿದ್ದರು.