ಟಿಂಡರ್ ನಲ್ಲಿ ಯುವತಿಯ ಮೋಹಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದ ಯುವಕ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಹೊಸದಿಲ್ಲಿ: ಟಿಂಡರ್ ಆ್ಯಪ್ ನಲ್ಲಿ ಯುವತಿಯ ಮೋಹಕ್ಕೆ ಬಿದ್ದು ಕೊಲೆಯಾಗಿದ್ದ ಯುವಕನ ಪ್ರಕರಣದಲ್ಲಿ ಕೊನೆಗೂ ಐದು ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದ್ದು, ಯುವತಿ ಸೇರಿದಂತೆ ಮೂವರಿಗೆ ಜೈಪುರದ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
2018ರಲ್ಲಿ ದುಷ್ಯಂತ ಶರ್ಮಾ (28)ಗೆ ಟಿಂಡರ್ ಡೇಟಿಂಗ್ ಆ್ಯಪ್ ನಲ್ಲಿ ಪ್ರಿಯಾ ಸೇಠ್(27) ಜೊತೆ ಮೈತ್ರಿಯುಂಟಾದಾಗ ಸಂಭ್ರಮದಲ್ಲಿದ್ದ,ಇಬ್ಬರ ಆಸಕ್ತಿಗಳೂ ಒಂದೇ ಆಗಿವೆಯೆಂಬಂತೆ ಕಂಡು ಬಂದಿತ್ತು. ಮೂರು ತಿಂಗಳುಗಳ ಕಾಲ ಆ್ಯಪ್ ನಲ್ಲಿಯೇ ಮಾತನಾಡಿಕೊಂಡಿದ್ದ ಇಬ್ಬರೂ ಬಳಿಕ ಪರಸ್ಪರ ಖುದ್ದಾಗಿ ಭೇಟಿಯಾಗಲು ನಿರ್ಧರಿಸಿದ್ದರು. ತನ್ನ ಬಾಡಿಗೆ ಮನೆಗೆ ಬರುವಂತೆ ಪ್ರಿಯಾ ದುಷ್ಯಂತನನ್ನು ಆಹ್ವಾನಿಸಿದ್ದಳು ಮತ್ತು ಆತ ಅದಕ್ಕೆ ತಕ್ಷಣ ಒಪ್ಪಿಕೊಂಡಿದ್ದ.
ಆದರೆ ಅವರಿಬ್ಬರ ಈ ಸಂಬಂಧ ಎರಡು ಸುಳ್ಳುಗಳ ಮೇಲೆ ನಿರ್ಮಾಣಗೊಂಡಿತ್ತು. ವಿವಾಹಿತನಾಗಿದ್ದ ದುಷ್ಯಂತ ಟಿಂಡರ್ ನಲ್ಲಿ ವಿವಾನ್ ಕೊಹ್ಲಿ ಎಂಬ ಸುಳ್ಳು ಹೆಸರಿನಲ್ಲಿ ಖಾತೆಯನ್ನು ತೆರೆದಿದ್ದ ಮತ್ತು ತಾನು ದಿಲ್ಲಿಯ ಶ್ರೀಮಂತ ಉದ್ಯಮಿ ಎಂದು ಹೇಳಿಕೊಂಡಿದ್ದ. ಅತ್ತ ಪ್ರಿಯಾ ದುಷ್ಯಂತನನ್ನು ಅಪಹರಿಸಿ ದುಡ್ಡು ದೋಚುವ ಏಕೈಕ ಉದ್ದೇಶದಿಂದ ಆತನೊಂದಿಗೆ ಮಾತುಗಳಲ್ಲಿ ತೊಡಗಿಕೊಂಡಿದ್ದಳು.
ದುಷ್ಯಂತ ತನ್ನ ಮನೆಯೊಳಗೆ ಹೆಜ್ಜೆ ಇರಿಸಿದ ತಕ್ಷಣ ತನ್ನಿಬ್ಬರು ಸಹವರ್ತಿಗಳಾದ ದೀಕ್ಷಾಂತ ಕಾಮ್ರಾ ಮತ್ತು ಲಕ್ಷ್ಯ ವಾಲಿಯಾ ನೆರವಿನಿಂದ ಪ್ರಿಯಾ ಆತನನ್ನು ಅಪಹರಿಸಿದ್ದಳು. ಒತ್ತೆ ಹಣಕ್ಕಾಗಿ ದುಷ್ಯಂತನ ಕುಟುಂಬಕ್ಕೆ ಕರೆ ಮಾಡಿದಾಗ ಈ ‘ದಿಲ್ಲಿ ಉದ್ಯಮಿ’ ತಾನು ಹೇಳಿಕೊಂಡಂತೆ ಶ್ರೀಮಂತ ವ್ಯಕ್ತಿಯಲ್ಲ ಎನ್ನುವುದು ಪ್ರಿಯಾ ಮತ್ತು ಸಹಚರರಿಗೆ ಗೊತ್ತಾಗಿತ್ತು. 10 ಲಕ್ಷ ರೂ.ಗಳನ್ನು ನೀಡಲು ದುಷ್ಯಂತ ಕುಟುಂಬವು ವಿಫಲಗೊಂಡ ಬಳಿಕ ಅವರು ಆತನನ್ನು ಚೂರಿಯಿಂದ ಹಲವಾರು ಬಾರಿ ಇರಿದು, ತಲೆದಿಂಬನ್ನು ಮುಖಕ್ಕೆ ಒತ್ತಿ ಹತ್ಯೆಗೈದಿದ್ದರು.
ಇದಕ್ಕೂ ಮುನ್ನ ಪ್ರಿಯಾ ದುಷ್ಯಂತನ ಫೋನ್ ನಿಂದ ಆತನ ತಂದೆ ರಾಮೇಶ್ವರ ಪ್ರಸಾದ ಶರ್ಮಾಗೆ ಕರೆ ಮಾಡಿಸಿ,10 ಲಕ್ಷ ರೂ.ಗಳ ಒತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಳು ಮತ್ತು ಅದನ್ನು ದುಷ್ಯಂತನ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಸೂಚಿಸಿದ್ದಳು. ಆದರೆ ಅಷ್ಟೊಂದು ಹಣವಿಲ್ಲದಿದ್ದ ಶರ್ಮಾ ಮೂರು ಲಕ್ಷ ರೂ.ಜಮಾ ಮಾಡಿದ್ದರು. ದುಷ್ಯಂತನ ಡೆಬಿಟ್ ಕಾರ್ಡ್ ಕಿತ್ತುಕೊಂಡಿದ್ದ ಪ್ರಿಯಾ ಆತನಿಂದ ಬಲವಂತದಿಂದ ಪಿನ್ ನಂಬರ್ ಪಡೆದುಕೊಂಡಿದ್ದಳು. ದುಷ್ಯಂತನ ಖಾತೆಯಿಂದ 20,000 ರೂ.ತೆಗೆದಿದ್ದ ಆರೋಪಿಗಳು ತಮ್ಮ ಕೃತ್ಯ ಬಯಲಾಗಬಹುದು ಎಂಬ ಭೀತಿಯಿಂದ ಆತನನ್ನು ಕೊಂದು ಹಾಕಿದ್ದರು. 2018,ಮೇ 4ರಂದು ಜೈಪುರದ ಹೊರವಲಯದ ಗ್ರಾಮದಲ್ಲಿ ಸೂಟ್ಕೇಸ್ ನಲ್ಲಿ ದುಷ್ಯಂತನ ಮೃತದೇಹ ಪತ್ತೆಯಾಗಿತ್ತು.