ಸಂದೇಶ್ ಖಾಲಿ ʼಸಂತ್ರಸ್ತೆʼ ಈಗ ಬಿಜೆಪಿ ಅಭ್ಯರ್ಥಿ
ಕೊಲ್ಕತ್ತಾ: ಬಿಜೆಪಿ ಅಭ್ಯರ್ಥಿಯಾಗಿ ಸಂದೇಶ್ ಖಾಲಿ ಸಂತ್ರಸ್ತೆ ಎನ್ನಲಾದ ರೇಖಾ ಪಾತ್ರಾ ಅವರನ್ನು ಲೋಕಸಭಾ ಚುನಾವಣಾ ಕಣಕ್ಕೆ ಇಳಿಸುತ್ತಿದ್ದಂತೆ ಇವರ ಉಮೇದುವಾರಿಕೆಯನ್ನು ಖಂಡಿಸುವ ಪೋಸ್ಟರ್ ಗಳು ಸಂದೇಶ್ ಖಾಲಿ ಪ್ರದೇಶದಲ್ಲಿ ತಲೆ ಎತ್ತಿವೆ.
ಟಿಎಂಸಿಯಿಂದ ಅಮಾನತುಗೊಂಡಿರುವ ಶಹಜಹಾನ್ ಶೇಖ್ ಮತ್ತು ಆತನ ಸಹಚರರಿಂದ ಚಿತ್ರಹಿಂಸೆಗೆ ಗುರಿಯಾಗಿದ್ದರು ಎನ್ನಲಾದ ರೇಖಾ ಪಾತ್ರ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದ ಬೆನ್ನಲ್ಲೇ, ಅವರ ವಿರುದ್ಧದ ಕೈಬರಹದ ಪೋಸ್ಟರ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುತ್ತಿವೆ.
ಇದರಲ್ಲಿ ಟಿಎಂಸಿ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದ್ದು, ಇದನ್ನು ಆ ಪಕ್ಷ ನಿರಾಕರಿಸಿದೆ. ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಬೇಕಿರುವ ಪಾತ್ರಾ ಅವರನ್ನು ಸಂದೇಶ್ ಖಾಲಿ ಪ್ರದೇಶವನ್ನು ಒಳಗೊಳ್ಳುವ ಬಾಸಿರ್ ಹಾತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕೆ ಇಳಿಸಿದೆ.
ರೇಖಾ ಅಭ್ಯರ್ಥಿಯಾಗುವುದನ್ನು ನಾವು ಬಯಸುವುದಿಲ್ಲ. ರೇಖಾ ಬಿಜೆಪಿ ಅಭ್ಯರ್ಥಿಯಾಗುವುದು ನಮಗೆ ಬೇಕಿಲ್ಲ ಎಂಬ ಬರಹಗಳ ಪೋಸ್ಟರ್ ಗಳು ಸೋಮವಾರ ಕಂಡುಬಂದಿವೆ. "ಇದು ನಮ್ಮ ಪೋಸ್ಟರ್ ಗಳಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷ ಇಂಥ ಕೀಳು ರಾಜಕೀಯದಲ್ಲಿ ತೊಡಗಿಸಿಕೊಂಡಿದೆ" ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಟಿಎಂಸಿ ನಿರಾಕರಿಸಿದೆ.
ಆದರೆ ಸ್ಥಳೀಯ ಮಹಿಳೆಯರು ಈ ಉಮೇದುವಾರಿಕೆಯನ್ನು ಬೆಂಬಲಿಸಿದ್ದಾರೆ. ನಮ್ಮ ಗ್ರಾಮದಿಂದ ಇದುವರೆಗೆ ಯಾರೂ ಸಂಸದರಾಗಿ ಆಯ್ಕೆಯಾಗಿರಲಿಲ್ಲ. ಇದೀಗ ನಮಗೆ ಆ ಅವಕಾಶ ಬಂದಿದೆ ಎಂದು ಹೇಳಿದ್ದಾರೆ.
ಸಂದೇಶ್ ಖಾಲಿ ಪ್ರತಿಭಟನೆಯಲ್ಲಿ ಪೈಕಿ ರೇಖಾ ಪಾತ್ರ ಪ್ರಮುಖ ಧ್ವನಿಯಾಗಿದ್ದರು. ಇವರ ಆರೋಪದ ಮೇಲೆ ಪೊಲೀಸರು ಶೇಖ್ ಸಹಚರ ಶಿಬು ಹಝ್ರಾ ಎಂಬಾತನನ್ನು ಬಂಧಿಸಿದ್ದರು. ಸಂದೇಶ್ ಖಾಲಿ ಮಹಿಳೆಯರ ಸ್ಥಿತಿಯನ್ನು ಪ್ರಧಾನಿಗೆ ವಿವರಿಸುವ ಸಲುವಾಗಿ ತೆರಳಿದ್ದ ನಿಯೋಗದಲ್ಲಿ ಕೂಡಾ ರೇಖಾ ಪಾತ್ರ ಇದ್ದರು.