ಯುಸಿಸಿಯನ್ನು ಉತ್ತರಾಖಂಡ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

Update: 2025-02-21 23:39 IST
ಯುಸಿಸಿಯನ್ನು ಉತ್ತರಾಖಂಡ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
Photo: ANI
  • whatsapp icon

ಹೊಸದಿಲ್ಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB)ಯು ಉತ್ತರಾಖಂಡ ಹೈಕೋರ್ಟ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ (UCC)ಯನ್ನು ಪ್ರಶ್ನಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯುಸಿಸಿ ಕಾನೂನು ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುತ್ತದೆ. 1937 ರ ಷರಿಯಾ ಅರ್ಜಿ ಕಾಯ್ದೆ ಮತ್ತು ಭಾರತೀಯ ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟ ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಅರ್ಜಿಯಲ್ಲಿ ಪ್ರಶ್ನಿಸಿದೆ ಎಂದು ಎಐಎಂಪಿಎಲ್‌ಬಿ ವಕ್ತಾರ ಎಸ್‌ಕ್ಯೂಆರ್ ಇಲ್ಯಾಸ್ ಹೇಳಿದ್ದಾರೆ.

ಉತ್ತರಾಖಂಡ ಹೈಕೋರ್ಟ್ ಅರ್ಜಿಯನ್ನು ಸ್ವೀಕರಿಸಿದ್ದು, ಈ ಕುರಿತ ವಿಚಾರಣೆಯನ್ನು ಏಪ್ರಿಲ್ 1 ಕ್ಕೆ ನಿಗದಿಪಡಿಸಲಾಗಿದೆ.

ಜನವರಿ 27 ರಂದು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಧಿಸೂಚನೆಯು ಜಾರಿಗೆ ಬಂತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಹತ್ತು ಮಂದಿ ಬೇರೆ ಬೇರೆ ವ್ಯಕ್ತಿಗಳ ಮುಖಾಂತರ UCC ಯನ್ನು ಪ್ರಶ್ನಿಸಿ ಉತ್ತರಾಖಂಡದ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದೆ. ಅರ್ಜಿ ಸಲ್ಲಿಸಿದವರಲ್ಲಿ ಸಂತ್ರಸ್ತರೂ ಸೇರಿದ್ದಾರೆ. ಕೆಲವರು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ರಝಿಯಾ ಬೇಗ್, ಅಬ್ದುಲ್ ಬಾಸಿತ್ (ಇಬ್ಬರೂ ವಿವಿಧ ಸಮಿತಿಗಳ ರಾಜ್ಯ ಸಂಚಾಲಕರು), ಖುರ್ಷೀದ್ ಅಹ್ಮದ್, ತೌಫೀಕ್ ಆಲಂ, ಮುಹಮ್ಮದ್ ತಾಹಿರ್, ನೂರ್ ಕರಮ್ ಖಾನ್, ಅಬ್ದುಲ್ ರೌಫ್, ಯಾಕೂಬ್ ಸಿದ್ದಿಕಿ, ಲತಾಫತ್ ಹುಸೇನ್ ಮತ್ತು ಅಖ್ತರ್ ಹುಸೇನ್ ಅರ್ಜಿದಾರರಾಗಿದ್ದು, ಅವರೆಲ್ಲಾ ಉತ್ತರಖಂಡದ ನಿವಾಸಿಗಳು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಕೀಲರಾದ ನಬೀಲಾ ಜಮೀಲ್ ಅವರು ಅರ್ಜಿಯನ್ನು ಸಿದ್ಧಪಡಿಸಿದ್ದಾರೆ. ಹಿರಿಯ ವಕೀಲರಾದ ಎಂಆರ್ ಶಂಶಾದ್ ಅವರು ಅರ್ಜಿಯನ್ನು ಅಂತಿಮಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಅರ್ಜಿಯು ಮೂಲಭೂತ ಹಕ್ಕುಗಳು ಮತ್ತು ವ್ಯಕ್ತಿಗಳ, ಪಂಗಡಗಳ ಇತರ ಹಕ್ಕುಗಳ ಉಲ್ಲಂಘನೆ ಸೇರಿದಂತೆ ವಿವಿಧ ಆಧಾರದ ಮೇಲೆ ಇಡೀ ಸಂಹಿತೆಯನ್ನು ಪ್ರಶ್ನಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News