ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು; ಮೈತ್ರಿಕೂಟದ ಬಗ್ಗೆ ಆರ್‌ಜೆಡಿ ವಕ್ತಾರ ಹೇಳಿದ್ದೇನು?
ಪಾಟ್ನಾ: ಬಿಹಾರದ ಮಹಾ ಮೈತ್ರಿಕೂಟ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂದು ಬಿಹಾರದಲ್ಲಿ ಉದ್ಭವಗೊಂಡಿರುವ ರಾಜಕೀಯ ಬಿಕ್ಕಟ್ಟಿನ ಬೆನ್ನಿಗೇ ಶನಿವಾರ ಮಹಾ ಮೈತ್ರಿಕೂಟದ ಪಾಲುದಾರ ಪಕ್ಷವಾದ ಆರ್‌ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಸ್ಪಷ್ಟನೆ ನೀಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಿಹಾರ ರಾಜ್ಯ ಆರ್‌ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ, “ಮಹಾ ಮೈತ್ರಿಕೂಟ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ. ಇಂದಿನ ಮಟ್ಟಿಗೆ ಎಲ್ಲವೂ ಸಹಜವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ, ನಾಳೆಯೇನಾದರೂ ಅನಿರೀಕ್ಷಿತ ಪರಿಸ್ಥಿತಿಯೇನಾದರೂ ಉದ್ಭವಿಸಿದರೆ ಅದನ್ನು ಎದುರಿಸಲು ಆರ್‌ಜೆಡಿ ಸಿದ್ಧವಿದೆ ಎಂದೂ ಅವರು ಹೇಳಿದ್ದಾರೆ.
“ರಾಜ್ಯದ ಹಾಲಿ ರಾಜಕೀಯ ಪರಿಸ್ಥಿತಿಯ ಕುರಿತು ಹೇಳುವುದಾದರೆ, ಕೆಲವು ಮಾಧ್ಯಮಗಳ ವರದಿಯ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ರಾಜಕೀಯ ಚಿತ್ರಣದ ಕುರಿತು ಸ್ಪಷ್ಟನೆ ನೀಡುವ ಹೊಣೆಗಾರಿಕೆ ಹೊಂದಿದ್ದಾರೆ. ಅವರು ರಾಜ್ಯದಲ್ಲಿ ಮಹಾ ಮೈತ್ರಿಕೂಟ ಸರ್ಕಾರವನ್ನು ಮುನ್ನಡೆಸುತ್ತಿರುವುದರಿಂದ, ಅವರೇ ಪರಿಸ್ಥಿತಿಯ ಕುರಿತು ಸ್ಪಷ್ಟನೆ ನೀಡಬೇಕು” ಎಂದು ಸಲಹೆ ನೀಡಿದ್ದಾರೆ.
ಈ ನಡುವೆ, ಆಡಳಿತಾರೂಢ ಮಹಾ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಬೆನ್ನಿಗೇ, ಲೋಕಸಭಾ ಚುನಾವಣೆ ಕುರಿತು ಚರ್ಚಿಸಲು ಬಿಜೆಪಿಯು ಶನಿವಾರ ತನ್ನ ಪಕ್ಷದ ಸಂಸದರು ಹಾಗೂ ಶಾಸಕರ ಸಭೆಯನ್ನು ಆಯೋಜಿಸಿದೆ.