ಲೋಕಸಭಾ ಚುನಾವಣಾ ವೆಚ್ಚಕ್ಕಾಗಿ ಹೆಚ್ಚುವರಿ 3,000 ಕೋಟಿ ರೂ. ಕೋರಿದ ಕೇಂದ್ರ
ಹೊಸದಿಲ್ಲಿ: ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ 3,147.9 ಕೋಟಿ ರೂ.ಯನ್ನು ಹೆಚ್ಚುವರಿಯಾಗಿ ಖರ್ಚು ಮಾಡಲು ಕೇಂದ್ರ ಸರಕಾರವು ಸೋಮವಾರ ಸಂಸತ್ತಿನ ಅನಮೋದನೆಯನ್ನು ಕೋರಿದೆ.
2023-24ರ ಅವಧಿಯ ಪೂರಕ ಅನುದಾನ ಬೇಡಿಕೆಯ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಮಂಡಿಸಿದ್ದಾರೆ. ನಿರ್ದಿಷ್ಟ ವರ್ಷದಲ್ಲಿ ಸರಕಾರದ ವೆಚ್ಚಗಳನ್ನು ನಿಭಾಯಿಸಲು ಸಂಸತ್ ಅಂಗೀಕಾರ ನೀಡಿರುವ ನಿಧಿಯು ಸಾಕಾಗದಿದ್ದರೆ ಇಂಥ ಬೇಡಿಕೆಯನ್ನು ಮಂಡಿಸಲಾಗುತ್ತದೆ.
2024ರ ಲೋಕಸಭಾ ಚುನಾವಣೆಗೆ ಈಗಾಗಲೇ 2,183.8 ಕೋಟಿ ರೂಪಾಯಿ ಮೊತ್ತವನ್ನು ಸಂಸತ್ ಈಗಾಗಲೇ ಮಂಜೂರು ಮಾಡಿದೆ. ಈಗ ಈ ಹೆಚ್ಚುವರಿ ಅನುದಾನ ಬೇಡಿಕೆಗೆ ಸಂಸತ್ತು ಅಂಗೀಕಾರ ನೀಡಿದರೆ, ಚುನಾವಣಾ ಸಂಬಂಧಿ ಖರ್ಚಿಗಾಗಿ ಕಾನೂನು ಮತ್ತು ನ್ಯಾಯ ಸಚಿವಾಲಯವು ಪಡೆಯುವ ಒಟ್ಟು ಮೊತ್ತ 5,331.7 ಕೋಟಿ ರೂ.ಗೆ ಏರುತ್ತದೆ.
ಫೆಬ್ರವರಿಯಲ್ಲಿ ಮಂಡಿಸಲಾಗಿರುವ ಕೇಂದ್ರ ಬಜೆಟ್ನಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರ (ಇವಿಎಮ್)ಗಳ ಖರೀದಿಗಾಗಿ 1891.8 ಕೋಟಿ ರೂ., ಲೋಕಸಭಾ ಚುನಾವಣೆಗಾಗಿ 180 ಕೋಟಿ ರೂಪಾಯಿ, ಮತದಾರರ ಗುರುತು ಚೀಟಿಗಳಿಗಾಗಿ 18 ಕೋಟಿ ರೂಪಾಯಿ ಮತ್ತು ‘‘ಇತರ ಚುನಾವಣಾ ವೆಚ್ಚಗಳಿಗಾಗಿ’’ 94 ಕೋಟಿ ರೂ. ತೆಗೆದಿಡಲಾಗಿತ್ತು.
ಹೆಚ್ಚುವರಿಯಾಗಿ ಕೋರಿರುವ 3,147.9 ಕೋಟಿ ರೂ.ಯಲ್ಲಿ, 2,536.65 ಕೋಟಿ ರೂ.ಯನ್ನು ಚುನಾವಣಾ ಸಂಬಂಧಿ ವೆಚ್ಚದಲ್ಲಿ ಭಾರತ ಸರಕಾರದ ಪಾಲನ್ನು ಪಾವತಿಸುವುದಕ್ಕಾಗಿ ಮೀಸಲಿಡಲಾಗುವುದು ಮತ್ತು 611 ಕೋಟಿ ರೂ.ಯನ್ನು ಇವಿಎಂ ಗಳ ಖರೀದಿ, ಪರೀಕ್ಷೆ ಮತ್ತು ನಿರ್ವಹಣೆಗಾಗಿ ಬಳಸಲಾಗುವುದು ಎಂದು ಸರಕಾರ ಹೇಳಿದೆ.
2004ರ ಲೋಕಸಭಾ ಚುನಾವಣೆಗಾಗಿ ಕೇಂದ್ರ ಸರಕಾರವು 1,016 ಕೋಟಿ ರೂ. ಖರ್ಚು ಮಾಡಿದ್ದರೆ, 2009ರಲ್ಲಿ ಈ ವೆಚ್ಚ 1,114.3 ಕೋಟಿ ರೂಪಾಯಿ ಆಗಿತ್ತು. 2014ರಲ್ಲಿ ಅದು 3,870.3 ಕೋಟಿ ರೂ.ಗೆ ಏರಿತ್ತು.