ಉತ್ತರಾಖಂಡ | ಅಂತರಧರ್ಮೀಯ ಮದುವೆಯಾಗುವುದಾಗಿ ಘೋಷಿಸಿದ ಬಳಿಕ ಜೋಡಿಯ ಮಾಹಿತಿ ಬಹಿರಂಗ!

Update: 2025-02-06 18:46 IST
ಉತ್ತರಾಖಂಡ | ಅಂತರಧರ್ಮೀಯ ಮದುವೆಯಾಗುವುದಾಗಿ ಘೋಷಿಸಿದ ಬಳಿಕ ಜೋಡಿಯ ಮಾಹಿತಿ ಬಹಿರಂಗ!

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಉಧಮಸಿಂಗ್ ನಗರ: ಮುಹಮ್ಮದ್ ಶಾನು(22) ಮತ್ತು ಆಕಾಂಶಾ ಕಂದರಿ(23) ತಾವು ಮದುವೆಯಾಗಲು ಬಯಸಿದ್ದೇವೆ ಎಂದು ಜ.7ರಂದು ಇಲ್ಲಿಯ ಉಪವಿಭಾಗಾಧಿಕಾರಿ(ಎಸ್ಡಿಎಂ)ಗಳ ಕಚೇರಿಯಲ್ಲಿ ನೋಟಿಸ್ ಸಲ್ಲಿಸಿದಾಗ ತಾವು ಕೇವಲ ಕಾರ್ಯವಿಧಾನವನ್ನು ಅನುಸರಿಸುತ್ತಿದ್ದೇವೆ ಎಂದು ಅವರು ಭಾವಿಸಿದ್ದರು. ತಮ್ಮ ಸಂಪೂರ್ಣ ವಿವರಗಳೊಂದಿಗೆ ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತದೆ ಎಂದು ಅವರು ಕನಸುಮನಸಿನಲ್ಲಿಯೂ ಊಹಿಸಿರಲಿಲ್ಲ. ಅಲ್ಲಿಂದ ಅವರ ದುಃಸ್ವಪ್ನ ಆರಂಭಗೊಂಡಿದೆ.

ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ‘ಲವ್ ಜಿಹಾದ್’ ಅಡಿಬರಹದೊಂದಿಗೆ ಕಾಣಿಸಿಕೊಂಡಿತ್ತು ಎಂದು ಬಾಝ್ಪುರದಲ್ಲಿ ಸಲೂನ್ ಹೊಂದಿರುವ ಶಾನು ಹೇಳಿದರು.

ಉತ್ತರಾಖಂಡ ಉಚ್ಚ ನ್ಯಾಯಾಲಯದ ಡಿ.16ರ ಆದೇಶದ ಮೇರಗೆ ಈ ಯುವಜೋಡಿಗೆ ಪೋಲಿಸ್ ರಕ್ಷಣೆಯನ್ನು ಒದಗಿಸಲಾಗಿದ್ದರೂ ಈ ಘಟನೆ ನಡೆದಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ,ತಾವು ಮದುವೆಯಾಗಲು ಬಯಸಿದ್ದೇವೆ,ಆದರೆ ಕಂದರಿಯ ತಾಯಿ ಮತ್ತು ಇತರ ಸಂಘಟನೆಗಳ ಬೆದರಿಕೆಗಳಿಂದಾಗಿ ಮದುವೆಯಾಗಲು ಸಾಧ್ಯವಾಗುತ್ತಿಲ್ಲ ಎಂದು ಜೋಡಿ ಹೇಳಿದ್ದರು. ತಮ್ಮ ಜೀವಗಳಿಗೆ ಗಂಭೀರ ಬೆದರಿಕೆಯಿದೆ ಎಂದೂ ಅವರು ಆರೋಪಿಸಿದ್ದರು.

ಜೋಡಿಯ ಪ್ರಕಾರ ಆದೇಶಗಳ ಹೊರತಾಗಿಯೂ ಅವರು ಬಲಪಂಥೀಯ ಗುಂಪುಗಳಿಂದ ವಿರೋಧವನ್ನು ಎದುರಿಸುತ್ತಲೇ ಇದ್ದಾರೆ. ಜ.30ರಂದು ಕಂದರಿಯ ತಾಯಿ ರೀನಾದೇವಿ ಮದುವೆಗೆ ಆಕ್ಷೇಪ ಸಲ್ಲಿಸಲು ಎಸ್ಡಿಎಂ ಕಚೇರಿಗೆ ಭೇಟಿ ನೀಡಿದಾಗ ಬಜರಂಗ ದಳದಂತಹ ಸಂಘಟನೆಗಳು ಅವರ ಜೊತೆಯಲ್ಲಿದ್ದವು.

ಎಸ್ಡಿಎಮ್ಗೆ ಸಲ್ಲಿಸಿರುವ ಪತ್ರದಲ್ಲಿ ರೀನಾದೇವಿ ನೋಟಿಸ್ನ್ನು ಪರಿಶೀಲಿಸುವವರೆಗೆ ಮಗಳನ್ನು ತನ್ನ ವಶಕ್ಕೆ ನೀಡುವಂತೆ ಕೋರಿದ್ದು, ಶಾನು ‘ಲವ್ಜಿಹಾದ್’ನಡಿ ತನ್ನ ಮಗಳಿಗೆ ಆಮಿಷವೊಡ್ಡಿದ್ದಾನೆ ಮತ್ತು ದಾರಿ ತಪ್ಪಿಸಿದ್ದಾನೆ ಎಂದು ಆರೋಪಿಸಿದ್ದಾರೆ. ತಾನು ಸ್ವಂತ ಇಚ್ಛೆಯಿಂದ ನನ್ನನ್ನು ಮದುವೆಯಾಗುತ್ತೇನೆ ಎಂದು ಆಕಾಂಶಾ ಎಸ್ಡಿಎಂ ಮುಂದೆ ದೃಢಪಡಿಸಿದ್ದಾಳೆ ಎಂದು ಶಾನು ತಿಳಿಸಿದರು.

ಜೋಡಿ 2018ರಿಂದ ಫೇಸ್ಬುಕ್ನಲ್ಲಿ ಸಂಪರ್ಕದಲ್ಲಿದ್ದು,2022ರಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದರು.

‘ಮದುವೆಯಾಗುವ ನಮ್ಮ ನಿರ್ಧಾರವನ್ನು ಕಂದರಿಯ ತಾಯಿ ಮತ್ತು ಸೋದರನಿಗೆ ತಿಳಿಸಿದ್ದೆವು. ಮೊದಲು ಅವರು ನಕಾರ ವ್ಯಕ್ತಪಡಿಸಿದ್ದರಾದರೂ ನಾನು ಅವರ ಮನವೊಲಿಸಿದ್ದೆ. ಬಳಿಕ ಈ ವಿಷಯವನ್ನು ತಿಳಿದ ಬಜರಂಗ ದಳದವರು ಕಂದರಿಯ ತಾಯಿಯ ಮೇಲೆ ಒತ್ತಡ ಹೇರಲು ಆರಂಭಿಸಿದ್ದರು ಎಂದು ಹೇಳಿದ ಶಾನು, ಫೆ.7ರಂದು ತಮ್ಮ ವಿವಾಹ ಪ್ರಮಾಣಪತ್ರ ಸಿಗುವ ಭರವಸೆಯಿದೆ ಎಂದರು.

ಈ ನಡುವೆ ಬೆದರಿಕೆಗಳು ಶಾನುವಿನ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿವೆ. ಮೊದಲು ರಾತ್ರಿ 10 ಗಂಟೆಯವರೆಗೂ ಶಾನು ತನ್ನ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಸಂಜೆ ಆರು ಗಂಟೆಗೇ ಸಲೂನ್ ಮುಚ್ಚುವಂತಾಗಿದೆ.

ಉಧಮಸಿಂಗ್ ನಗರ ವಿಹಿಂಪ ಘಟಕವು ಪ್ರತಿಕ್ರಿಯಿಸಲು ನಿರಾಕರಿಸಿದ್ದರೆ, ಸುದ್ದಿಸಂಸ್ಥೆಯು ಮಾಡಿದ ಕರೆಗಳು ಮತ್ತು ಸಂದೇಶಗಳಿಗೆ ಜಿಲ್ಲಾ ಬಜರಂಗ ದಳ ಘಟಕವೂ ಉತ್ತರಿಸಿಲ್ಲ. ಆದರೆ ಜ.30ರಂದು ಫೇಸ್ಬುಕ್ ವೀಡಿಯೊದಲ್ಲಿ ಜಿಲ್ಲಾ ಬಜರಂಗ ದಳ ಮುಖ್ಯಸ್ಥ ಯಶ್ಪಾಲ್ ರಾಜಹಂಸ್,‘ನಮ್ಮ ಕಾರ್ಯಕರ್ತರು ಕಂದರಿಯ ಮನವೊಲಿಸಲು ಪ್ರಯತ್ನಿಸಿದ್ದರು,ಆದರೆ ಆಕೆ ಶಾನುವನ್ನು ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಉತ್ತರಾಖಂಡದಲ್ಲಿ ಲವ್ಜಿಹಾದ್ ವಿರುದ್ಧ ಕಾನೂನುಗಳಿವೆ. ಅವರ ಮದುವೆಯನ್ನು ನಾವು ವಿರೋಧಿಸುತ್ತೇವೆ. ಬಜರಂಗ ದಳ ಮತ್ತು ವಿಹಿಂಪ ಈ ಮದುವೆಯನ್ನು ತಡೆಯಲು ಕಟಿಬದ್ಧವಾಗಿವೆ ’ಎಂದು ಹೇಳಿದ್ದಾರೆ.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ
https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News