ಮಣಿಪುರ ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣ: ಆರೋಪಿ ಮುಸ್ಲಿಂ ಎಂದು ಸುಳ್ಳು ಸುದ್ದಿ ಟ್ವೀಟ್ ಮಾಡಿ ಬಳಿಕ ಕ್ಷಮೆಯಾಚಿಸಿದ ANI ಸುದ್ದಿಸಂಸ್ಥೆ
ಹೊಸದಿಲ್ಲಿ: ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಈ ನಡುವೆ ಇಬ್ಬರು ಮಹಿಳೆಯರ ಬೆತ್ತಲಾಗಿಸಿ ಸಾರ್ವಜನಿಕವಾಗಿ ಕಿರುಕುಳ ನೀಡುತ್ತಿರುವ ವೀಡಿಯೊವೊಂದು ವೈರಲ್ ಆಗಿತ್ತು. ಈ ವೀಡಿಯೋ ವಿರುದ್ಧ ಸಾಮಾಜಿಕ ತಾಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶ ಉಂಟಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧವಿಲ್ಲದ ಪ್ರಕರಣವೊಂದರ ಆರೋಪಿಯನ್ನು ಹೆಸರಿಸಿ ಪ್ರಕರಣವನ್ನು ಮುಸ್ಲಿಂ ಆಯಾಮದೆಡೆಗೆ ತಿರುಗಿಸಲೆತ್ನಿಸಿದ್ದಾರೆಂದು ಆರೋಪಿಸಲಾಗಿದ್ದು, ANI ಕೊನೆಗೂ ಕ್ಷಮೆಯಾಚಿಸಿದೆ.
ವಿಭಿನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಹಿಲೀಮ್ ಎಂಬಾತನನ್ನು ಬಂಧಿಸಿದ ಕುರಿತು ಮಣಿಪುರ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಲಾಗಿತ್ತು. ಆದರೆ, ಅಬ್ದುಲ್ ಹಿಲೀಮ್ ನನ್ನು ಯುವತಿಯನ್ನು ಬೆತ್ತಲಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ANI ಟ್ವೀಟ್ ಮಾಡಿತ್ತು. ಇದನ್ನೇ NDTV ಕೂಡಾ ಪ್ರಕಟಿಸಿತ್ತು.
ಕೂಡಲೇ ಈ ಕುರಿತು ಆಲ್ಟ್ ನ್ಯೂಸ್ ಸಹಸಂಸ್ಥಾಕ ಮುಹಮ್ಮದ್ ಝುಬೈರ್ ಸತ್ಯಾಂಶವನ್ನು ಜನರ ಮುಂದಿಟ್ಟಿದ್ದರು. ಒಂದೆಡೆ ಫೇಕ್ ನ್ಯೂಸ್ ವೈರಲ್ ಆಗುತ್ತಿದ್ದಂತೆಯೇ ಸ್ಪಷ್ಟೀಕರಣವೂ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಆದರೆ ತಾವು ಸುಳ್ಳುಸುದ್ದಿ ಪ್ರಕಟಿಸಿದ 12 ಗಂಟೆಯ ಬಳಿಕ ಕಣ್ತಪ್ಪಿನಿಂದ ನಡೆದ ಪ್ರಮಾದ ಎಂದು ANI ಕ್ಷಮೆಯಾಚಿಸಿದೆ.