ಪಂಜಾಬಿನಲ್ಲಿ ಪ್ರಧಾನಿ ಮೋದಿ ಮತಯಾಚನೆ ವೇಳೆ ದಾಳಿ, ಗೃಹಬಂಧನ ಮತ್ತು ಬಂಧನಗಳಿಗೆ ಗುರಿಯಾದ ರೈತರು: ವರದಿ

Update: 2024-05-25 11:45 GMT

Photo: X/@narendramodi

ಜಲಂಧರ: ಬಹುಹಂತಗಳ ಬ್ಯಾರಿಕೇಡ್ ಗಳು, ರೈತ ನಾಯಕರ ಗೃಹಬಂಧನಗಳು ಮತ್ತು ಬಂಧನಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಪಂಜಾಬಿನ ಗುರುದಾಸಪುರ ಮತ್ತು ಜಲಂಧರ ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಚುನಾವಣಾ ರ್ಯಾಲಿಗಳ ಎರಡನೇ ದಿನವನ್ನು ಪೂರೈಸಿದ್ದಾರೆ. ತನ್ನ ಸರಕಾರವನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರುವಂತೆ ಅವರು ಮತದಾರರನ್ನು ಆಗ್ರಹಿಸಿದ್ದಾರೆ. ಪಂಜಾಬಿನಲ್ಲಿ ಜೂ.1ರಂದು ಮತದಾನ ನಡೆಯಲಿದೆ.

ರೈತರು ಬಿರುಬಿಸಿಲನ್ನೂ ಲೆಕ್ಕಿಸದೆ ಕಪ್ಪು ಬಾವುಟಗಳನ್ನು ಹಿಡಿದುಕೊಂಡು ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ ಮೋದಿ ಗುರುದಾಸಪುರದಲ್ಲಿ ತನ್ನ ಭಾಷಣದಲ್ಲಿ ಒಮ್ಮೆ ಮಾತ್ರ ರೈತರನ್ನು ಪ್ರಸ್ತಾಪಿಸಿದ್ದರು. ಜಲಂಧರದಲ್ಲಿ ಅವರು ರೈತರ ಬಗ್ಗೆ ಮಾತೇ ಆಡಲಿಲ್ಲ ಎಂದು thewire.in ವರದಿ ಮಾಡಿದೆ.

ರೈತರು ಮೋದಿಯವರ ಪ್ರಚಾರ ಸಭೆಗೆ ಬರುವುದನ್ನು ತಡೆಯಲು ಹೆದ್ದಾರಿಗಳಲ್ಲಿ ಪೋಲಿಸ್ ವಾಹನಗಳು ಮತ್ತು ಮಣ್ಣು ತುಂಬಿದ್ದ ಟಿಪ್ಪರ್ಗಳನ್ನು ನಿಲ್ಲಿಸಲಾಗಿತ್ತು.

ಬೆಳಿಗ್ಗೆಯಿಂದಲೇ ಪಂಜಾಬ್ ಪೋಲಿಸ್ ಮತ್ತು ಇತರ ಭದ್ರತಾ ಪಡೆಗಳು ಗುರುದಾಸಪುರ, ಜಲಂಧರ, ಅಮೃತಸರ, ಕಪುರ್ತಲಾ, ನವಾನ್ಶಹರ ಮತ್ತು ಫರೀದ್ಕೋಟ ಜಿಲ್ಲೆಗಳಲ್ಲಿ ಸಂಯುಕ್ತ ಕಿಸಾನ ಮೋರ್ಚಾ (ಎಸ್ಕೆಎಂ) ಮತ್ತು ಕಿಸಾನ ಮಜ್ದೂರ್ ಮೋರ್ಚಾ(ಕೆಎಂಎಂ)ದ ರೈತ ನಾಯಕರ ಮನೆಗಳ ಬಾಗಿಲುಗಳನ್ನು ಬಡಿಯುತ್ತಿದ್ದವು. ಅನೇಕ ರೈತರನ್ನು ಗೃಹಬಂಧನದಲ್ಲಿರಿಸಿದ ಪೋಲಿಸರು,ಇತರರು ರ್ಯಾಲಿ ಸ್ಥಳಗಳಿಗೆ ತಲುಪುವುದನ್ನು ತಡೆಯಲು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು.

ಗುರುದಾಸಪುರದಲ್ಲಿ ರೈತರ ಕುರಿತು ಮಾತನಾಡಿದ ಮೋದಿ,ಕಾಂಗ್ರೆಸ್ ಮತ್ತು ಆಪ್ ದೇಶದ ಭವಿಷ್ಯವನ್ನು ಪಣಕ್ಕಿಡುತ್ತಿವೆ. ಅವು ಪಂಜಾಬಿನ ಭವಿಷ್ಯವನ್ನು ಪಣಕ್ಕಿಡುತ್ತಿವೆ. ಪಂಜಾಬಿನಲ್ಲಿಂದು ಮಾದಕ ದ್ರವ್ಯಗಳು ಯುವಕರನ್ನು ಹಾಳು ಮಾಡುತ್ತಿವೆ,ಕ್ರಿಮಿನಲ್ಗಳು ರಾಜ್ಯ ಸರಕಾರದ ಬೆಂಬಲ ಪಡೆಯುತ್ತಿದ್ದಾರೆ,ಅಭಿವೃದ್ಧಿ ಸ್ಥಗಿತಗೊಂಡಿದೆ ಮತ್ತು ರೈತರು ಕಷ್ಟದಲ್ಲಿದ್ದಾರೆ ಎಂದು ಹೇಳಿದರು.ಸಿರಿಧಾನ್ಯಗಳನ್ನು ಬೆಳೆಯುವಂತೆ ಮತ್ತು ಅವುಗಳನ್ನು ವಿಶ್ವ ಪ್ರಸಿದ್ಧ ಆಹಾರವನ್ನಾಗಿಸಲು ತನ್ನ ಸರಕಾರದ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ರೈತರಿಗೆ ಸೂಚಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ತನ್ನ ಸರಕಾರವು ಪಂಜಾಬಿನಿಂದ ದಾಖಲೆ ಪ್ರಮಾಣದಲ್ಲಿ ಗೋದಿ ಮತ್ತು ಭತ್ತವನ್ನು ಖರೀದಿಸಿದೆ ಎಂದ ಅವರು,‘ಕಾಂಗ್ರೆಸ್ಗೆ ಹೋಲಿಸಿದರೆ ನಮ್ಮ ಸರಕಾರವು ಈ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಶೇ.2.5ರಷ್ಟು ಹೆಚ್ಚಿಸಿದೆ. ರೈತರ ಬೀಜಗಳು ಮತ್ತು ರಸಗೊಬ್ಬರಗಳ ಅಗತ್ಯಗಳನ್ನು ಪೂರೈಸಲು ಪಿಎಂ ಸಮ್ಮಾನ್ ನಿಧಿ ಯೋಜನೆಯನ್ನು ತಂದಿದ್ದೇವೆ. ನಮ್ಮ ಸರಕಾರವು ರೈತರ ಖಾತೆಗಳಿಗೆ 30,000 ರೂ.ಗಳನ್ನೂ ಜಮಾ ಮಾಡಿದೆ ’ ಎಂದು ಹೇಳಿದರು.

ಮೋದಿ ಉದ್ದೇಶಗಳನ್ನು ಪ್ರಶ್ನಿಸಿದ ರೈತ ನಾಯಕರು

ಕೆಎಂಎಂ ಸಂಯೋಜಕ ಹಾಗೂ ಕಿಸಾನ ಮಜ್ದೂರ್ ಸಂಘರ್ಷ ಸಮಿತಿಯ ಅಧ್ಯಕ್ಷ ಸರ್ವನ್ ಸಿಂಗ್ ಪಂಧೇರ್ ಅವರು ಪಂಜಾಬಿಗೆ ಮೋದಿಯವರ ಭೇಟಿಯನ್ನು ಪ್ರಶ್ನಿಸಿದ್ದಾರೆ. ಮೋದಿಯವರು ಈಗಾಗಲೇ ಒಪ್ಪಿಕೊಂಡಿರುವ ರೈತರ ಬೇಡಿಕೆಗಳನ್ನು ಇನ್ನೂ ಏಕೆ ಈಡೇರಿಸಿಲ್ಲ? 2014ರ ಚುನಾವಣಾ ಭರವಸೆಯಂತೆ ಅವರು ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯನ್ನು ಏಕೆ ಜಾರಿಗೊಳಿಸಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಕೇಳಿದ್ದಾರೆ.

ರೈತರು ಮೋದಿಯವರನ್ನು ಪ್ರಶ್ನಿಸುವುದನ್ನು ತಡೆದ ರೀತಿಯು ವಿಶ್ವದ ಅತ್ಯುತ್ತಮ ಪ್ರಜಾಪ್ರಭುತ್ವ ದೇಶಗಳ ಪಟ್ಟಿಯಲ್ಲಿ ಭಾರತವು ಏಕೆ ಕನಿಷ್ಠ ಸ್ಥಾನದಲ್ಲಿದೆ ಎನ್ನುವುದನ್ನು ವಿವರಿಸಿದೆ ಎಂದು ಹೇಳಿದ ಯೂನಿಯನ್ ನಾಯಕರು,ಬೃಹತ್ ಬೆಂಬಲವನ್ನು ತೋರಿಸಲು ಅವರು ಇತರ ರಾಜ್ಯಗಳಿಂದ ಬಸ್ಗಳಲ್ಲಿ ಜನರನ್ನು ಕರೆತರುತ್ತಿದ್ದರು,ಆದರೆ ಪಂಜಾಬಿನ ಜನರು ದ್ವೇಷದ ರಾಜಕೀಯವನ್ನು ಇಷ್ಟ ಪಡುವುದಿಲ್ಲ ಎಂದರು.

‘ರೈತರ ಕುರಿತು ಮೋದಿಯವರ ಭಾಷಣಗಳು ವಿರೋಧಾಭಾಸಗಳಿಂದ ಕೂಡಿವೆ. ರೈತರ ಸಂಕಷ್ಟಗಳನ್ನು ಬಗೆಹರಿಸಲು ಏನನ್ನೂ ಮಾಡದೆ ಎಲ್ಲವನ್ನೂ ಕಾರ್ಪೊರೇಟ್ಗಳಿಗೆ ನೀಡಿರುವ ಅವರು ಏನು ಹೇಳಲು ಸಾಧ್ಯ? ರೈತರಿಗಾಗಿ ತಾನು ಏನು ಮಾಡಿದ್ದೇನೆ ಎನ್ನುವುದನ್ನು ಅವರು ತಿಳಿಸಬೇಕು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೇ 28ರಂದು ಪಂಜಾಬಿನಲ್ಲಿ ಬಿಜೆಪಿ ಅಭ್ಯರ್ಥಿಗಳ ನಿವಾಸಗಳಿಗೆ ಮುತ್ತಿಗೆ ಹಾಕಲು ನಾವು ನಿರ್ಧರಿಸಿದ್ದೇವೆ ’ ಎಂದು ಪಂಧೇರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News