'ಭಾರತದಲ್ಲಿರುವ ಬರಾಕ್‌ ಒಬಾಮಾಗಳ ಬಗ್ಗೆ ಗಮನಹರಿಸುತ್ತೇವೆ': ವಿವಾದ ಸೃಷ್ಟಿಸಿದ ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ಹೇಳಿಕೆ

Update: 2023-06-23 17:36 GMT

ನವದೆಹಲಿ: ಹಿಂದೂ ಬಹುಸಂಖ್ಯಾರಿರುವ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ರಕ್ಷಿಸಿ ಎಂಬ ಹೇಳಿಕೆಯನ್ನು ನೀಡಿರುವ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಹುಸೇನ್‌ ಒಬಾಮರ ಕುರಿತು ಪತ್ರಕರ್ತರೊಬ್ಬರು ಕೇಳಿರುವ ಪ್ರಶ್ನೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನೀಡಿದ ಉತ್ತರ ಈಗ ವಿವಾದಕ್ಕೆ ಕಾರಣವಾಗಿದೆ.

ʼಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ರಕ್ಷಿಸಿ' ಎಂಬ ಹೇಳಿಕೆ ನೀಡಿದ ಬರಾಕ್‌ ಒಬಾಮರನ್ನು ಬಂಧಿಸಲು ಅಸ್ಸಾಂ ಪೊಲೀಸರು ಅಮೇರಿಕಾಕ್ಕೆ ಹೋಗುತ್ತಾರೆಯೇ ಎಂದು ರೋಹಿಣಿ ಸಿಂಗ್‌ ಎಂಬವರು ಹಾಕಿದ್ದ ಟ್ವೀಟ್‌ ಗೆ ಉತ್ತರಿಸಿರುವ ಹಿಮಂತ ಬಿಸ್ವಾ ಶರ್ಮ, “ಭಾರತದಲ್ಲೇ ಹಲವಾರು ಹುಸೇನ್‌ ಒಬಾಮಾಗಳಿದ್ದಾರೆ. ವಾಷಿಂಗ್ಟನ್‌ಗೆ (ಒಬಾಮರನ್ನು ಬಂಧಿಸಲು) ತೆರಳುವ ಮುನ್ನ, ಭಾರತದಲ್ಲಿರುವ ಹುಸೇನ್‌ ಒಬಾಮಗಳನ್ನು ನೋಡಿಕೊಳ್ಳಲು ಸರ್ಕಾರವು ಆದ್ಯತೆ ನೀಡುತ್ತದೆʼ ಎಂದು ಹೇಳಿದ್ದಾರೆ.

“ಭಾರತದಲ್ಲಿಯೇ ಅನೇಕ ಹುಸೇನ್ ಒಬಾಮರು ಇದ್ದಾರೆ. ವಾಷಿಂಗ್ಟನ್‌ಗೆ ಹೋಗುವುದನ್ನು ಪರಿಗಣಿಸುವ ಮೊದಲು ನಾವು ಅವರ ನೋಡಿಕೊಳ್ಳುವ ಬಗ್ಗೆ ಆದ್ಯತೆ ನೀಡಬೇಕು. ಅಸ್ಸಾಂ ಪೊಲೀಸರು ನಮ್ಮ ಸ್ವಂತ ಆದ್ಯತೆಗಳ ಪ್ರಕಾರ ಕಾರ್ಯನಿರ್ವಹಿಸುತ್ತಾರೆ” ಎಂದು ಶರ್ಮಾ ಟ್ವೀಟ್‌ ಮಾಡಿದ್ದಾರೆ.

ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ 'ಭಾರತದಲ್ಲಿ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ' ಎಂದು ಹೇಳಿದ ಕೆಲವೇ ಗಂಟೆಗಳ ಬಳಿಕ ಶರ್ಮಾ ಅವರು ಈ ಹೇಳಿಕೆ ನೀಡಿದ್ದಾರೆ.

ಹೇಮಂತ್‌ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದು, ಭಾರತದಲ್ಲಿ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ನಡೆಯುವುದಿಲ್ಲ ಎಂದು ಪ್ರಧಾನಿ ಮೋದಿ ಅಮೇರಿಕಾದಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಅವರ ಮುಖ್ಯಮಂತ್ರಿಯೊಬ್ಬರು ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬರ್ಥದಲ್ಲಿ ಪತ್ರಕರ್ತೆ ರಾಣಾ ಅಯ್ಯೂಬ್‌ ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News