ಬಿಹಾರ ರಾಜಕೀಯ ಬಿಕ್ಕಟ್ಟು: ‘ಧನ್ಯವಾದಗಳು ತೇಜಸ್ವಿ’ ಎಂದು ಪತ್ರಿಕಾ ಜಾಹೀರಾತು ನೀಡಿದ ಆರ್ ಜೆಡಿ
ಪಾಟ್ನಾ: “ಧನ್ಯವಾದಗಳು ತೇಜಸ್ವಿ” ಎಂದು ಮಹಾ ಮೈತ್ರಿಯ ಪಾಲುದಾರ ಪಕ್ಷವಾದ ಬಿಹಾರ ಆರ್ ಜೆಡಿ ಘಟಕವು ಪತ್ರಿಕಾ ಜಾಹೀರಾತು ಬಿಡುಗಡೆ ಮಾಡಿದೆ. ಆ ಮೂಲಕ ಆರ್ ಜೆಡಿ ನೇತೃತ್ವ ವಹಿಸಿರುವ ಲಾಲೂ ಪ್ರಸಾದ್ ಅವರ 34 ವರ್ಷದ ಪುತ್ರನ ವರ್ಚಸ್ಸನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
2020ರ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಆರ್ ಜೆಡಿ ಹೊರಹೊಮ್ಮಿದರೂ, ಬಹುಮತದ ಕೊರತೆ ಎದುರಿಸಿದ್ದರಿಂದ ಕಾಂಗ್ರೆಸ್ ಹಾಗೂ ಎಡ ಪಕ್ಷಗಳೊಂದಿಗಿನ ಮಹಾ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗಿ ಬಂದಿತ್ತು.
ಆಗಸ್ಟ್ 2022ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮರು ಮೈತ್ರಿ ಸಾಧಿಸುವಲ್ಲಿ ಯಶಸ್ವಿಯಾಗುವ ಮೂಲಕ ಆರ್ಜೆಡಿ ಮತ್ತೆ ಅಧಿಕಾರದ ಸವಿಯನ್ನು ಸವಿದಿತ್ತು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ತೊರೆದಿದ್ದ ನಿತೀಶ್ ಕುಮಾರ್, ಆ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಇದೀಗ ಅವರು ಮತ್ತೆ ಎನ್ಡಿಎ ಸೇರ್ಪಡೆಯಾಗಿದ್ದಾರೆ.