ಬಿಜೆಡಿ, ವೈಎಸ್ಆರ್ ಸಿಪಿ ಬೆಂಬಲ: ರಾಜ್ಯಸಭೆಯಲ್ಲೂ ದೆಹಲಿ ಸೇವೆಗಳ ಮಸೂದೆ ಅಂಗೀಕಾರ
ಹೊಸದಿಲ್ಲಿ: ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ವಿವಾದಿತ ದೆಹಲಿ ಸೇವೆಗಳ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದೆ.
ರಾಜ್ಯಸಭೆಯಲ್ಲಿ ಆರುವರೆ ಗಂಟೆಗಳ ಚರ್ಚೆಯ ಬಳಿಕ ಬಿಜು ಜನತಾದಳ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಮಸೂದೆ ಸುಲಭವಾಗಿ ಆಂಗೀಕಾರವಾಯಿತು.
ಲೋಕಸಭೆ ಶುಕ್ರವಾರ ಮಸೂದೆಗೆ ಒಪ್ಪಿಗೆ ನೀಡಿದ್ದು, ಇದೀಗ ಕಾನೂನು ಆಗಿ ಘೋಷಣೆಯಾಗುವ ಮುನ್ನ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ.
ಮಸೂದೆ ಅಂಗೀಕಾರ ಕೇಂದ್ರ ಸರ್ಕಾರದ ಗೆಲುವು ಎಂದು ಬಣ್ಣಿಸಲಾಗಿದ್ದು, ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳ ನಡುವಿನ ಹಗ್ಗಜಗ್ಗಾಟಕ್ಕೆ ತೆರೆ ಬೀಳಬಹುದೇ ಎಂದು ಕಾದು ನೋಡಬೇಕಾಗಿದೆ.
ದೆಹಲಿ ರಾಷ್ಟ್ರರಾಜಧಾನಿ ಪ್ರದೇಶ ಸರ್ಕಾರದ (ತಿದ್ದುಪಡಿ) ಮಸೂದೆಯ ಪರವಾಗಿ 131 ಮತಗಳು ಚಲಾವಣೆಯಾದರೆ 102 ಮತಗಳು ಮಸೂದೆಯ ವಿರುದ್ಧವಾಗಿ ಬಿದ್ದವು. 238 ಸದಸ್ಯರ ಪೈಕಿ ಹಾಜರಿದ್ದ 233 ಮಂದಿ ಮತ ಚಲಾಯಿಸಿದರು. ಎನ್ ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿದ್ದರೂ, ತಲಾ ಒಂಬತ್ತು ಮಂದಿ ಸದಸ್ಯರನ್ನು ಹೊಂದಿರುವ ಬಿಜೆಡಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಬೆಂಬಲದೊಂದಿಗೆ ಮಸೂದೆ ಆಂಗೀಕಾರ ಸುಲಭವಾಯಿತು.
ಈ ಮಸೂದೆಯನ್ನು ಸಂವಿಧಾನಬಾಹಿರ ಎಂದು ಬಣ್ಣಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಮಸೂದೆ ಮೇಲಿನ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡರು. ದೆಹಲಿ ಕೇಂದ್ರಾಡಳಿತ ಪ್ರದೇಶ ಎನ್ನುವುದು ಅವರಿಗೂ ತಿಳಿದಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇರುವ ಸಮಾನ ಅಧಿಕಾರ ತಮಗೆ ಇಲ್ಲ ಎನ್ನುವುದು ಅವರಿಗೆ ಚುನಾವಣೆಗೆ ಸ್ಪರ್ಧಿಸುವಾಗ ತಿಳಿದಿರಲಿಲ್ಲವೇ ಎಂದು ವ್ಯಂಗ್ಯವಾಡಿದರು.