ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ | ಬ್ರಿಜ್ ಭೂಷಣ್‌ರನ್ನು ಕೈಬಿಟ್ಟು, ಅವರ ಮಗನನ್ನು ಕಣಕ್ಕಿಳಿಸಿದ ಬಿಜೆಪಿ

Update: 2024-05-02 12:33 GMT

PC : twitter.com

ಹೊಸದಿಲ್ಲಿ: ಬಿಜೆಪಿಯ ಸಂಸದ ಮತ್ತು ಕುಸ್ತಿ ಫೆಡರೇಷನ್ ನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಉತ್ತರ ಪ್ರದೇಶದ ಕೈಸರ್‌ಗಂಜ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಕರಣ್ ಭೂಷಣ್ ಸಿಂಗ್ ಹೆಸರನ್ನು ಘೋಷಿಸುವುದರ ಜೊತೆಗೆ, ಬಿಜೆಪಿಯು ಕಾಂಗ್ರೆಸ್ ಭದ್ರಕೋಟೆಯಾದ ರಾಯ್ ಬರೇಲಿಯಿಂದ ಪ್ರತಾಪ್ ಸಿಂಗ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಈ ಹಿಂದೆ ಸೋನಿಯಾ ಗಾಂಧಿ ಇಲ್ಲಿಂದ ಸ್ಪರ್ಧಿಸುತ್ತಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.

ಆರು ಅವಧಿಯ ಸಂಸದರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ವಿರುದ್ಧದ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳಿಂದಾಗಿ ಭಾರೀ ರಾಜಕೀಯ ಹಿನ್ನಡೆಯನ್ನು ಅನುಭವಿಸಿದ್ದಾರೆ. ಅವರ ವಿರುದ್ಧ ದೇಶದ ಪ್ರಮುಖ ಕುಸ್ತಿಪಟುಗಳು ಬೀದಿಗಿಳಿದರು. ಈ ಆರೋಪಗಳಿಂದ ರಾಜಕೀಯವಾಗಿ ಉತ್ತರ ಪ್ರದೇಶದಲ್ಲಿ ತನ್ನ ಚುನಾವಣಾ ಭವಿಷ್ಯವನ್ನು ಹಾಳುಮಾಡಲು ಬಿಜೆಪಿಗೆ ಇಷ್ಟವಿಲ್ಲದ ಕಾರಣ ಬದಲಿ ಅಭ್ಯರ್ಥಿಯನ್ನು ಹುಡುಕಿತು.

ಆದರೂ ಕೈಸರ್‌ಗಂಜ್ ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೊಂದಿರುವ ರಾಜಕೀಯ ಪ್ರಭಾವ ತಿಳಿದಿರುವ ಪಕ್ಷಕ್ಕೆ, ಬೇರೆ ಅಭ್ಯರ್ಥಿ ಹುಡುಕುವುದು ಸುಲಭದ ಮಾತಲ್ಲ. ಹೀಗಾಗಿ ಬ್ರಿಜ್ ಸ್ಥಾನಕ್ಕೆ ಅವರ ಮಗ ಕರಣ್ ಭೂಷಣ್ ಸಿಂಗ್ ಅವರನ್ನೇ ಆಯ್ಕೆ ಮಾಡಿದೆ.

ಬ್ರಿಜ್ ಭೂಷಣ್ ಅವರ ಹಿರಿಯ ಪುತ್ರ ಪ್ರತೀಕ್ ಭೂಷಣ್ ಸಿಂಗ್ ಶಾಸಕರಾಗಿದ್ದಾರೆ. ಕರಣ್ ಭೂಷಣ್ ಸಿಂಗ್ ಪ್ರಸಕ್ತ ಉತ್ತರ ಪ್ರದೇಶದ ಕುಸ್ತಿ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಕೈಸರ್‌ಗಂಜ್ ಕೇತ್ರಕ್ಕೆ ಲೋಕಸಭೆ ಚುನಾವಣೆಯು ಐದನೇ ಹಂತದಲ್ಲಿ ಮೇ 20 ರಂದು ನಡೆಯಲಿದೆ. ನಾಳೆ(ಮೇ.3) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಒಂದು ದಶಕದಿಂದ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಕಳೆದ ವರ್ಷದ ಆರಂಭದಲ್ಲಿ ದಿಲ್ಲಿಯಲ್ಲಿ ಪ್ರಮುಖ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರಿಂದ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೃಹತ್ ಪ್ರತಿಭಟನೆ ಎದುರಿಸಿದರು.ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಅವರ ವಿರುದ್ಧದ ಪ್ರಕರಣ ದಿಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದೆ.

ಕಳೆದ ತಿಂಗಳು, ಪಕ್ಷದ ಕೈಸರ್‌ಗಂಜ್ ಅಭ್ಯರ್ಥಿಯ ಘೋಷಣೆಯ ವಿಳಂಬಕ್ಕೆ ಬಿಜೆಪಿ ನಾಯಕರು ಮಾಧ್ಯಮಗಳನ್ನು ದೂಷಿಸಿದ್ದರು. "ನೀವು (ಮಾಧ್ಯಮ) ಆತಂಕ ಪಡುವ ಅಗತ್ಯವಿಲ್ಲ, ನಿಮ್ಮಿಂದಾಗಿ ನಮ್ಮ ಅಭ್ಯರ್ಥಿಯ ಘೋಷಣೆ ವಿಳಂಬವಾಗುತ್ತಿದೆ" ಎಂದು ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News