ತನ್ನ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದವನ್ನು ಬರೆಯಲೂ ಬಿಜೆಪಿ ನಿರಾಕರಿಸಿದೆ: ಅಸದುದ್ದೀನ್ ಉವೈಸಿ

Update: 2024-04-18 07:34 GMT

ಅಸದುದ್ದೀನ್ ಉವೈಸಿ (PTI)

ಹೈದರಾಬಾದ್: ಅಲ್ಪಸಂಖ್ಯಾತರ ಕುರಿತು ಬಿಜೆಪಿಗೆ ದ್ವೇಷವಿದೆ ಎಂದು ಆರೋಪಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ತನ್ನ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದವನ್ನು ಉಲ್ಲೇಖಿಸಲೂ ನಿರಾಕರಿಸುವ ಬಿಜೆಪಿ, ಅದರ ಬದಲು ‘ಅಂಚಿಗೆ ತಳ್ಳಲ್ಪಟ್ಟವರು’ ಎಂದು ಬಳಸುತ್ತದೆ ಎಂದು ಕಿಡಿ ಕಾರಿದ್ದಾರೆ.

“ನಾನು ಎಪ್ರಿಲ್ 17ರಂದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಬಿಜೆಪಿಯ ಜಾಹೀರಾತನ್ನು ನೋಡಿದೆ. ಸರಕಾರದಿಂದ‍ ವ್ಯಾಪಾರ ಪ್ರಾರಂಭಿಸಲು ಸಾಲ ನೀಡುವ ಕುರಿತು ಅವರು ಮಾತನಾಡುವಾಗ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗ ಎಂದೇ ಹೇಳುತ್ತಾರೆ. ಮುಸ್ಲಿಮರನ್ನು ಬಿಡಿ, ಅಲ್ಪಸಂಖ್ಯಾತರು ಎಂಬ ಪದವನ್ನು ಉಲ್ಲೇಖಿಸಲೂ ಬಿಜೆಪಿ ನಿರಾಕರಿಸುತ್ತದೆ. ಭಾರತದ ಸಂವಿಧಾನದಲ್ಲಿ ಅಲ್ಪಸಂಖ್ಯಾತರು ಎಂಬ ಪದವನ್ನು ಉಲ್ಲೇಖಿಸಲಾಗಿದೆ ಹಾಗೂ ಬಿಜೆಪಿಗೆ ಎಂಬ ಪದದ ಬಗ್ಗೆ ತೀವ್ರ ದ್ವೇಷವಿದೆ” ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ಅವರು ಅಲ್ಪಸಂಖ್ಯಾತರು ಎಂಬ ಪದವನ್ನು ಬಳಸುವುದಿಲ್ಲ. ಅವರು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ವಿದ್ಯಾರ್ಥಿ ವೇತನ ನೀಡುತ್ತೇವೆ ಎನ್ನುತ್ತಾರೆ” ಎಂದೂ ಅವರು ಹೇಳಿದ್ದಾರೆ.

ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಶಾಲೆಯನ್ನು ಮಧ್ಯದಲ್ಲೇ ತೊರೆದಿರುವ ವಿದ್ಯಾರ್ಥಿಗಳ ಪ್ರಮಾಣ ಅತ್ಯಧಿಕವಿದ್ದು, ಬಿಜೆಪಿಯು ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯದಲ್ಲಿ ಶಾಲೆಯನ್ನು ಮಧ್ಯದಲ್ಲೇ ತೊರೆಯುವ ವಿದ್ಯಾರ್ಥಿಗಳ ದರ ಹೆಚ್ಚಳವಾಗುವುದನ್ನು ಖಾತರಿಪಡಿಸುತ್ತಿದೆ ಎಂದು ಆಪಾದಿಸಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶದಲ್ಲಿನ ಅನುಪ್ರಿಯ ಪಟೇಲರ ಅಪ್ನಾ ದಳ(ಕೆ)ಯೊಂದಿಗೆ ಎಐಎಂಐಎಂ ಮಾಡಿಕೊಂಡಿರುವ ಮೈತ್ರಿಯು ವಿಧಾನಸಭಾ ಚುನಾವಣೆಗಳಿಗೂ ಮುಂದುವರಿಯಲಿದೆ ಎಂದು ಉವೈಸಿ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಅಕೋಲಾ ಹಾಗೂ ಅಮರಾವತಿ ಲೋಕಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ಪ್ರಕಾಶ್ ಅಂಬೇಡ್ಕರ್ ಹಾಗೂ ಆನಂದ್ ಅಂಬೇಡ್ಕರ್ ಅವರನ್ನು ಎಐಎಂಐಎಂ ಬೆಂಬಲಿಸಲಿದೆ ಎಂದು ಅವರು ಪ್ರಕಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News