ಚಂಪೈ ಸೊರೆನ್: ಕೊಲ್ಹಾನ್ ವಿಭಾಗದಿಂದ ಮುಖ್ಯಮಂತ್ರಿ ಗಾದಿಗೇರುತ್ತಿರುವ ನಾಲ್ಕನೇ ವ್ಯಕ್ತಿ
ಜೆಮ್ಶೆಡ್ಪುರ: ಅರ್ಜುನ್ ಮುಂಡಾ, ಮಧು ಕೋಡಾ, ರಘುಬರ ದಾಸ್, ಇದೀಗ ಚಂಪೈ ಸೊರೆನ್- ರಾಜ್ಯದ 23 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಖನಿಜ ಸಮೃದ್ಧ ಕೊಲ್ಹಾನ್ ವಿಭಾಗದಿಂದ ಮುಖ್ಯಮಂತ್ರಿ ಗಾದಿ ಏರುತ್ತಿರುವ ನಾಲ್ಕನೇ ವ್ಯಕ್ತಿಯಾಗಿ ದಾಖಲೆಗೆ ಸೇರ್ಪಡೆಯಾಗಿದ್ದಾರೆ.
ಸೆರೈಕೆಳ- ಖಸ್ರ್ವಾನ್ ಜಿಲ್ಲೆಯ ಸೆರೈಕೆಳ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವನ್ನು ಆರನೇ ಬಾರಿಗೆ ಪ್ರತಿನಿಧಿಸುತ್ತಿರುವ ಚಂಪೈ (68), 1991ರಲ್ಲಿ ಮೊದಲ ಬಾರಿಗೆ ಬಿಹಾರ ವಿಧಾನಸಭೆ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು. 2000ನೇ ಇಸವಿಯಲ್ಲಿ ಬಿಜೆಪಿಯ ಅನಂತರಾಮ್ ಟುಡು ಅವರ ವಿರುದ್ಧ ಸೋಲು ಅನುಭವಿಸಿದ್ದನ್ನು ಹೊರತುಪಡಿಸಿದರೆ ಇಲ್ಲಿಯವರೆಗೂ ಕ್ಷೇತ್ರವನ್ನು ಕಾಯ್ದುಕೊಂಡು ಬಂದಿದ್ದಾರೆ.
2000ನೇ ಇಸವಿಯ ನವೆಂಬರ್ 15ರಂದು ಜಾರ್ಖಂಡ್ ಪ್ರತ್ಯೇಕ ರಾಜ್ಯವಾಗಿ ಬಿಹಾರದಿಂದ ವಿಭಜಿಸಲ್ಪಟ್ಟಿತ್ತು. ಜೆಎಂಎಂಗೆ ಸೇರ್ಪಡೆಯಾದ ಚಂಪೈ 1995ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2000ನೇ ಇಸವಿಯಲ್ಲಿ ಸೋಲಿನ ಬಳಿಕ, 2005, 2009, 2014 ಮತ್ತು 2019ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. 1999 ಹಾಗೂ 2019ರಲ್ಲಿ ಇವರು ಸಿಂಗ್ ಭೂಮ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
2010ರಲ್ಲಿ ಅರ್ಜುನ್ ಮುಂಡಾ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2013 ಮತ್ತು 19ರ ಹೇಮಂತ್ ಸೊರೇನ್ ಸಂಪುಟದಲ್ಲೂ ಸಚಿವರಾಗಿ ಮುಂದುವರಿದಿದ್ದರು. ಸೆರೈಕೆಳ ಜಿಲ್ಲೆಯ ರಾಜನಗರ ತಾಲೂಕು ಜಿಲಿಂಗ್ಗೋರಾ ಗ್ರಾಮದಲ್ಲಿ ಜನಿಸಿದ ಚಂಪೈ, ಪ್ರತ್ಯೇಕ ರಾಜ್ಯ ಚಳವಳಿಯ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ್ದರು.