ಲಕ್ಷದ್ವೀಪದ ಶಾಲೆಗಳ ಸಮವಸ್ತ್ರದ ಕುರಿತು ಹೊಸ ಸುತ್ತೋಲೆ: ಹಿಜಾಬ್ ನಿಷೇಧಿಸುವ ಉದ್ದೇಶ ಎಂದ ಸಂಸದ ಮುಹಮ್ಮದ್ ಫೈಝಲ್

Update: 2023-08-12 10:08 GMT

ಕೊಚ್ಚಿ: ಲಕ್ಷದ್ವೀಪ ಆಡಳಿತದ ಶಾಲಾ ನಿರ್ದೇಶನಾಲಯವು ಶಾಲಾ ಸಮವಸ್ತ್ರಕ್ಕೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು ಎಂಬ ಸುತ್ತೋಲೆ ಹೊರಡಿಸಿದ್ದು, ಈ ಸುತ್ತೋಲೆಯು ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಉದ್ದೇಶ ಹೊಂದಿದೆ ಎಂದು ಲಕ್ಷದ್ವೀಪದ ಸಂಸದ ಮುಹಮ್ಮದ್ ಫೈಝಲ್ ಆರೋಪಿಸಿದ್ದಾರೆ ಎಂದು timesofindia ವರದಿ ಮಾಡಿದೆ.

“ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ಶಾಲಾ ಪ್ರಾಂಶುಪಾಲರು ಹಾಗೂ ಮುಖ್ಯೋಪಾಧ‍್ಯಾಯರು ಸಂಬಂಧಿಸಿದ ಪ್ರಾಧಿಕಾರವು ಅನುಮೋದಿಸಿರುವ ಶಾಲಾ ಸಮವಸ್ತ್ರಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು. ಈ ಸೂಚನೆಗಳ ಪಾಲನೆಯಾಗದಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಆಗಸ್ಟ್ 10ನೇ ತಾರೀಕು ನಮೂದಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಮದ್ಯ ತಯಾರಿಕೆಗೆ ಅನುಮತಿ ನೀಡುವುದರೊಂದಿಗೆ ಲಕ್ಷದ್ವೀಪದ ಸ್ಥಳೀಯರೂ ಕೂಡಾ ಮದ್ಯ ಖರೀದಿಸಬಹುದು ಎಂಬ ಕರಡು ಮಸೂದೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಹುಟ್ಟುಕೊಂಡಿರುವ ಹೊಸ ವಿವಾದ ಇದಾಗಿದೆ.

ಸದ್ಯ, ಲಕ್ಷದ್ವೀಪದಲ್ಲಿ ಕೇವಲ ಹೊರಗಿನವರಿಗೆ ಮಾತ್ರ ಮದ್ಯ ಲಭ್ಯವಿದ್ದು, ಇದರ ಮಾರಾಟದ ಪರವಾನಗಿಯನ್ನು ಕೇವಲ ಸರ್ಕಾರಿ ಒಡೆತನದ ರೆಸಾರ್ಟ್ಸ್ ಹಾಗೂ ಹೋಟೆಲ್‍ ಗಳಿಗೆ ಮಾತ್ರ ಇದೆ.

ಗುರುವಾರ ಶಿಕ್ಷಣ ಇಲಾಖೆಯ ನಿರ್ದೇಶಕ ರಾಕೇಶ್ ದಹಿಯಾ ಹೊರಡಿಸಿರುವ ಈ ಆದೇಶದಲ್ಲಿ, ಶಾಲಾ ಮಕ್ಕಳ ನಡುವೆ ಸಮಾನತೆ ಪರಿಕಲ್ಪನೆ ಮೂಡಿಸಲು ಸೂಚಿಸಲಾಗಿರುವ ಸಮವಸ್ತ್ರವನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ಧರಿಸುವುದರಿಂದ ಸಮಾನತೆಯ ಪರಿಕಲ್ಪನೆಗೆ ಧಕ್ಕೆಯಾಗಲಿದೆ ಎಂದು ಹೇಳಲಾಗಿದೆ.

ಶಾಲಾ ಪ್ರಾಂಶುಪಾಲರು ಈ ಸಂಬಂಧ ಲಿಖಿತ ನಿರ್ದೇಶನ ಬಯಸಿದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಸಂಸದ ಮುಹಮ್ಮದ್ ಫೈಝಲ್ ಆರೋಪಿಸಿದ್ದಾರೆ.

“ಶೇ. 99ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದರಿಂದ ಇಲ್ಲಿ ಹೆಚ್ಚು ಸಮಾನತೆ ಇದೆ. ಅವರು ಕೇವಲ ಶಿರವಸ್ತ್ರ(ತಟ್ಟಂ)ಗಳನ್ನು ಮಾತ್ರ ಧರಿಸುತ್ತಾರೆಯೇ ಹೊರತು ನೈಜ ಹಿಜಾಬ್ ಕೂಡಾ ಅಲ್ಲ. ಅವರೇನಾದರೂ ಅಂತಹ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ, ನಾವು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತಿಸುತ್ತೇವೆ” ಎಂದು ಸಂಸದ ಮುಹಮ್ಮದ್ ಫೈಝಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News