ʼನಾರಿ ನ್ಯಾಯ್‌ʼ: ಮಹಿಳೆಯರಿಗೆ ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

Update: 2024-03-13 10:08 GMT
Photo: PTI

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ ಪಕ್ಷ ಮಹಿಳೆಯರಿಗೆ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಇವುಗಳಲ್ಲಿ ದೇಶದ ಅತ್ಯಂತ ಬಡ ಕುಟುಂಬಗಳ ಓರ್ವ ಮಹಿಳೆಗೆ ವಾರ್ಷಿಕ ರೂ 1 ಲಕ್ಷ ನೇರ ನಗದು ವರ್ಗಾವಣೆ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಎಲ್ಲಾ ಹೊಸ ನೇಮಕಾತಿಗಳಿಗೆ ಶೇ 50 ಮೀಸಲಾತಿ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾರಿ ನ್ಯಾಯ್‌ ಗ್ಯಾರಂಟಿ ಘೋಷಿಸಿದರಲ್ಲದೆ ತಮ್ಮ ಪಕ್ಷದ ಗ್ಯಾರಂಟಿಗಳು ಟೊಳ್ಳು ಭರವಸೆಗಳು ಮತ್ತು ಹೇಳಿಕೆಗಳಲ್ಲ, ನಮ್ಮ ಮಾತುಗಳು ಕಲ್ಲಿನಲ್ಲಿ ಕೆತ್ತಲ್ಪಟ್ಟಿವೆ. ಇದು 1926ರಿಂದ ಈಗಿನ ತನಕ ನಮ್ಮ ದಾಖಲೆ. ನಮ್ಮ ವಿರೋಧಿಗಳು ಹುಟ್ಟುತ್ತಿರುವಾಗಿನಿಂದಲೇ ನಾವು ಪ್ರಣಾಳಿಕೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಮತ್ತು ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದೇವೆ,” ಎಂದು ಖರ್ಗೆ ಹೇಳಿದ್ದಾರೆ.

ಮಹಾರಾಷ್ಟ್ರದ ಧುಲೆ ಎಂಬಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಹಾಲಕ್ಷ್ಮಿ ಗ್ಯಾರಂಟಿ ಯೋಜನೆ ಘೋಷಿಸಿದ್ದರು. ಇದರನ್ವಯ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ ರೂ. 1 ಲಕ್ಷ ದೊರೆಯಲಿದೆ.

ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಶೇ. 50ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡುವ “ಆಧಿ ಆಬಾದಿ, ಪೂರಾ ಹಖ್” ಯೋಜನೆ, ಶಕ್ತಿ ಕಾ ಸಮ್ಮಾನ್‌ ಅಡಿಯಲ್ಲಿ ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರ ವೇತನಗಳಿಗೆ ಕೇಂದ್ರದ ಕೊಡುಗೆ ದ್ವಿಗುಣಗೊಳ್ಳಲಿದೆ.

ಅಧಿಕಾರ್‌ ಮೈತ್ರಿ ಗ್ಯಾರಂಟಿ ಯೋಜನೆಯಡಿ, ಪ್ರತಿ ಪಂಚಾಯತ್‌ನಲ್ಲಿ ಅಧಿಕಾರ್‌ ಮೈತ್ರಿ ನೇಮಿಸಲಿದೆ. ಇದು ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಿದೆ.

ಸಾವಿತ್ರಿ ಬಾಯಿ ಫುಳೆ ಹಾಸ್ಟೆಲ್ಸ್‌ ಗ್ಯಾರಂಟಿಯಡಿ, ದೇಶದಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು, ತಲಾ ಜಿಲ್ಲೆಯಲ್ಲಿ ಕನಿಷ್ಠ ಒಂದು ಹಾಸ್ಟೆಲ್‌ ನಿರ್ಮಿಸಲಾಗುವುದು ಎಂದು ಕಾಂಗ್ರೆಸ್‌ ಭರವಸೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News