“ಉಳಿದ ಅಧಿಕಾರಿಗಳು ಅಸಮರ್ಥರೇ?”: ಈಡಿ ಮುಖ್ಯಸ್ಥರ ಅಧಿಕಾರವಧಿ ವಿಸ್ತರಿಸಲು ಸುಪ್ರೀಂ ಕೋರ್ಟ್‌ ಅನುಮತಿ

Update: 2023-07-27 16:01 GMT

ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಎಸ್‌ಕೆ ಮಿಶ್ರಾ ಅವರ ಅಧಿಕಾರವಧಿಯನ್ನು ಸೆಪ್ಟೆಂಬರ್ 15, 2023 ರವರೆಗೆ ವಿಸ್ತರಿಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ಮಿಶ್ರಾ ಅವರಿಗೆ ನೀಡಲಾದ ಅಧಿಕಾರ ವಿಸ್ತರಣೆಯನ್ನು ಕಾನೂನುಬಾಹಿರವೆಂದು ನಾವು ಪರಿಗಣಿಸಿದ್ದರೂ, ಕೆಲಸ ಸುಗಮವಾಗಿ ನಡೆಯುವುದಕ್ಕಾಗಿ ಅವರನ್ನು ಜುಲೈ 31 ರವರೆಗೆ ಮುಂದುವರೆಯಲು ಅನುಮತಿ ನೀಡಿದ್ದೆವು. ಆದರೆ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಗಳನ್ನು ಪರಿಗಣಿಸಿ, ನಾವು ಅವರ ಅಧಿಕಾರವಧಿಯನ್ನು ಇನ್ನೂ ಕೆಲವು ಅವಧಿಗೆ ಮುಂದುವರಿಸಲು ಅವಕಾಶ ನೀಡುತ್ತೇವೆ. ಅವರ ಅಧಿಕಾರ ಅವಧಿಯನ್ನು ಸೆಪ್ಟೆಂಬರ್ 15, 2023 ರವರೆಗೆ ಮುಂದುವರಿಸಲು ಅನುಮತಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರ ಪೀಠವು ಹೇಳಿದೆ.

ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಾಗತಿಕ ಭಯೋತ್ಪಾದಕ ಹಣಕಾಸು ನಿಗಾ ಸಂಸ್ಥೆಯ ಪರಿಶೀಲನೆಯ ದೃಷ್ಟಿಯಿಂದ ಮಿಶ್ರಾ ಅವರನ್ನು ಮುಂದುವರೆಸುವ ಬಗ್ಗೆ ವಾದಿಸಿದ್ದು, ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, “ಉಳಿದ ಎಲ್ಲಾ ಅಧಿಕಾರಿಗಳು ಅಸಮರ್ಥರು ಎಂದು ನೀವು ಹೇಳುತ್ತೀರಾ? ಒಬ್ಬ ಅಧಿಕಾರಿ ಮಾತ್ರ ಕೆಲಸ ಮಾಡುವವರಾ?” ಎಂದು ನ್ಯಾಯಪೀಠವು ಪ್ರಶ್ನಿಸಿದೆ.

ಕೆಲವು ನೆರೆಯ ರಾಷ್ಟ್ರಗಳು ಭಾರತವು ಎಫ್‌ಎಟಿಎಫ್‌ನ 'ಬೂದು ಪಟ್ಟಿ'ಗೆ ಬೀಳಬೇಕೆಂದು ಬಯಸುತ್ತದೆ, ಆದ್ದರಿಂದ ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ಹುದ್ದೆಯಲ್ಲಿ ನಿರಂತರತೆ ಅಗತ್ಯ ಎಂದು ಕೇಂದ್ರವು ವಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News