ಗೋವಧೆ ಶಂಕೆ: ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಸ್ವಘೋಷಿತ ಗೋರಕ್ಷಕರು
ಬರೇಲಿ: ಹಸುವೊಂದನ್ನು ವಧೆ ಮಾಡಿದ ಶಂಕೆಯಿಂದ ಸ್ವಘೋಷಿತ ಗೋರಕ್ಷಕರು ವ್ಯಕ್ತಿಯೊಬ್ಬರನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ಸೋಮವಾರ ನಸುಕಿನ ವೇಳೆ ನಡೆದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಶಹದೀನ್ ಖುರೇಷಿ ಕೆಲ ಗಂಟೆಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಭಯಾನಕ ದಾಳಿಯ ವಿಡಿಯೊವನ್ನು ಗೋರಕ್ಷಕರು ಆನ್ಲೈನ್ ನಲ್ಲಿ ಮಂಗಳವಾರ ಹರಿಯಬಿಟ್ಟಿದ್ದಾರೆ. ಬಲಪಂಥೀಯ ಸಂಘಟನೆಯ ಕೆಲ ಕಾರ್ಯಕರ್ತರು ವ್ಯಕ್ತಿಯನ್ನು ಒದೆಯುತ್ತಿರುವ, ಗುದ್ದುತ್ತಿರುವ ಮತ್ತು ಹರಿತವಾದ ಆಯುಧಗಳಿಂದ ಹೊಡೆಯುತ್ತಿರುವ ದೃಶ್ಯ ವಿಡಿಯೊದಲ್ಲಿ ಕಾಣಿಸುತ್ತಿದೆ. ನೆಲದಲ್ಲಿ ಬಿದ್ದಿರುವ ವ್ಯಕ್ತಿಯ ಮೈತುಂಬಾ ಗಾಯಗಳು ಕಾಣಿಸುತ್ತಿದ್ದು, ಉಸಿರಾಡಲು ಕಷ್ಟಪಡುತ್ತಿರುವ ದೃಶ್ಯ ಮನ ಕಲುಕುವಂತಿದೆ. ಸಂತ್ರಸ್ತ ವ್ಯಕ್ತಿಯ ಪಕ್ಕದಲ್ಲಿ ಸತ್ತ ಹಸುವಿನ ಕಳೇಬರ ಇದ್ದು, ಹಸುವನ್ನು ಸಂತ್ರಸ್ತ ವ್ಯಕ್ತಿಯೇ ಹತ್ಯೆ ಮಾಡಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
"ಜಾನುವಾರನ್ನು ಹತ್ಯೆ ಮಾಡಲಾಗಿದೆ ಎನ್ನುವುದು ಸ್ಥಳೀಯರಿಗೆ ತಿಳಿದು ಬಂದಿದ್ದು, ಹಸುವನ್ನು ಹತ್ಯೆ ಮಾಡಲಾಗಿದೆ ಎನ್ನಲಾದ ಗುಂಪಿನ ಎಲ್ಲರೂ ತಪ್ಪಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಮಾತ್ರ ಸಾರ್ವಜನಿಕರು ಹಿಡಿದಿದ್ದಾರೆ. ಹಸುವಿನ ಕಳೇಬರವನ್ನು ಕಂಡು ಸಾರ್ವಜನಿಕರು ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಚಿಕಿತ್ಸೆ ವೇಳೆ ವ್ಯಕ್ತಿ ಮೃತಪಟ್ಟಿದ್ದಾನೆ. ವ್ಯಕ್ತಿಯ ಸಹೋದರ ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಕೊಲೆ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ ಬಂಧಿಸಲಾಗುವುದು" ಎಂದು ಮೊರದಾಬಾದ್ ನಗರ ಎಸ್ಪಿ ರಣವಿಜಯ ಸಿಂಗ್ ಹೇಳಿದ್ದಾರೆ.
"ನನ್ನ ಸಹೋದರ ಬಾಡಿಬಿಲ್ಡರ್ ಆಗಿದ್ದು, ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾಂಸದ ವ್ಯವಹಾರಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಹಾಗೂ ಈ ಮೊದಲು ಯಾವುದೇ ಪ್ರಕರಣ ಅವರ ವಿರುದ್ಧ ದಾಖಲಾಗಿರಲಿಲ್ಲ. ವರ್ಷದ ಹಿಂದೆ ಅಸ್ವಸ್ಥರಾಗಿದ್ದ ಅವರು ಆರು ತಿಂಗಳಿಂದ ಆಸ್ಪತ್ರೆಯಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆಗ ಅವರ ಉದ್ಯೋಗ ನಷ್ಟವಾಯಿತು.. ನನ್ನ ಸಹೋದರ ಅಂಥ ಕೆಲಸ ಎಂದೂ ಮಾಡಿಲ್ಲ. ಬೇರೆಯವರು ಮಾಡಿರಬಹುದು; ಅದಕ್ಕೆ ಅವರು ಬೆಲೆ ತೆರುವಂತಾಗಿದೆ" ಎಂದು ಮೃತ ವ್ಯಕ್ತಿಯ ಸಹೋದರ ಶಹಜಾದ್ ಹೇಳಿದ್ದಾರೆ.