ಮ್ಯಾನ್ಮಾರ್ ನೊಂದಿಗೆ ಮುಕ್ತ ಸಂಚಾರ ಒಪ್ಪಂದ ರದ್ದುಗೊಳಿಸಲು ನಿರ್ಧಾರ: ಅಮಿತ್ ಶಾ

Update: 2024-02-08 16:30 GMT

ಅಮಿತ್ ಶಾ | Photo: PTI 

ಹೊಸದಿಲ್ಲಿ : ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವುದಕ್ಕಾಗಿ ಭಾರತ ಮತ್ತು ಮ್ಯಾನ್ಮಾರ್ ನಡುವಿನ ಮುಕ್ತ ಸಂಚಾರ ಒಪ್ಪಂದ (ಎಫ್ಎಂಆರ್)ವನ್ನು ರದ್ದುಗೊಳಿಸಲು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ತಿಳಿಸಿದ್ದಾರೆ.

ಮ್ಯಾನ್ಮಾರ್ ನ ಗಡಿಯಲ್ಲಿರುವ ಭಾರತದ ಈಶಾನ್ಯ ರಾಜ್ಯಗಳ ಜನಸಂಖ್ಯಾ ಸ್ವರೂಪವನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಮಿತ್ ಶಾ ಅವರು ಹೇಳಿದ್ದಾರೆ.

‘‘ಮುಕ್ತ ಸಂಚಾರ ಒಪ್ಪಂದವನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೊಡಗಿದ್ದು, ಈ ಬಗ್ಗೆ ಗೃಹ ಸಚಿವಾಲಯ ಕೂಡ ಮುಕ್ತ ಸಂಚಾರ ಒಪ್ಪಂದವನ್ನು ತಕ್ಷಣ ರದ್ದುಗೊಳಿಸುವಂತೆ ಶಿಫಾರಸು ಮಾಡಿದೆ’’ ಎಂದು ಅಮಿತ್ ಶಾ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿದ್ದಾರೆ.

ಪ್ರಕ್ಷುಬ್ದ ಗಡಿಯಲ್ಲಿ ಅಸ್ತಿತ್ವದಲ್ಲಿರುವ ಮುಕ್ತ ಸಂಚಾರ ಒಪ್ಪಂದವನ್ನು ಅಂತ್ಯಗೊಳಿಸಲು ಭಾರತ-ಮ್ಯಾನ್ಮಾರ್ನ ಸಂಪೂರ್ಣ 1.643 ಕಿ.ಮೀ. ಗಡಿಗೆ ಬೇಲಿ ಹಾಕಲು ಭಾರತ ನಿರ್ಧರಿಸಿದೆ ಎಂದು ಹೇಳಿದ ದಿನಗಳ ಬಳಿಕ ಅಮಿತ್ ಶಾ ಅವರು ಈ ಘೋಷಣೆ ಮಾಡಿದ್ದಾರೆ.

ಮುಕ್ತ ಸಂಚಾರ ಒಪ್ಪಂದ

ಮುಕ್ತ ಸಂಚಾರ ಒಪ್ಪಂದ ಭಾರತ-ಮ್ಯಾನ್ಮಾರ್ ಗಡಿಯ ಸಮೀಪ ವಾಸಿಸುತ್ತಿರುವ ಜನರಿಗೆ ಯಾವುದೇ ದಾಖಲೆಗಳಿಲ್ಲದೆ ಪರಸ್ಪರ, ಇತರರ ಪ್ರದೇಶದಲ್ಲಿ 15 ಕಿ.ಮೀ. ವರೆಗೆ ಸಂಚರಿಸಲು ಅವಕಾಶ ನೀಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News