ದಿಲ್ಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ : ವ್ಯಕ್ತಿಯೊಬ್ಬನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಮುಂಬೈ ಪೊಲೀಸರು
ಮುಂಬೈ: ಮುಂಬೈ-ದಿಲ್ಲಿ ಮಾರ್ಗದ ವಿಮಾನದಲ್ಲಿ ಮಹಿಳೆಯೊಬ್ಬರು ಬಾಂಬ್ ಅನ್ನು ಕೊಂಡೊಯ್ಯುತ್ತಿದ್ದಾರೆ ಎಂದು ದಿಲ್ಲಿ ವಿಮಾನ ನಿಲ್ದಾಣ ನಿಯಂತ್ರಣ ಕೊಠಡಿಗೆ ಹುಸಿ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಕರೆ ಮಾಡಿದ್ದ ವ್ಯಕ್ತಿಯು ಮಹಿಳೆಯ ಸೋದರಳಿಯ ಇರಬಹುದು ಎಂದು ಶಂಕಿಸಲಾಗಿದೆ. ಆತ ಅಂಧೇರಿಯಲ್ಲಿ ವಾಸಿಸುತ್ತಿದ್ದು, ಹುಸಿ ಬಾಂಬ್ ಬೆದರಿಕೆಯ ಉದ್ದೇಶದ ಕುರಿತು ತನಿಖೆ ಪ್ರಗತಿಯಲ್ಲಿದೆ.
ಪಶ್ಚಿಮ ಅಂಧೇರಿ ನಿವಾಸಿಯಾದ 60 ವರ್ಷ ವಯಸ್ಸಿನ ಗೌರಿ ಭರ್ವಾನಿ ಎಂಬ ಹೆಸರಿನ ಮಹಿಳೆಯ ಹೆಸರನ್ನು ಆತ ತನ್ನ ಹುಸಿ ಬಾಂಬ್ ಬೆದರಿಕೆ ಕರೆಯಲ್ಲಿ ಉಲ್ಲೇಖಿಸಿದ ನಂತರ, ಆತನ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಪ್ರಯಾಣಿಕಳು ಮಾನವ ಬಾಂಬ್ ಆಗಿದ್ದು, ಆಕೆ ತನ್ನ ಸ್ನೇಹಿತನನ್ನು ಭೇಟಿಯಾಗಲು ತೆರಳುತ್ತಿದ್ದಾಳೆ. ಆಕೆ ದಿಲ್ಲಿಯಿಂದ ಉಝ್ಬೆಕಿಸ್ತಾನಕ್ಕೆ ತನ್ನ ಪ್ರಯಾಣ ಮುಂದುವರಿಸಲಿದ್ದಾಳೆ. 90 ಲಕ್ಷ ರೂಪಾಯಿ ತನ್ನೊಂದಿಗೆ ಒಯ್ಯುತ್ತಿದ್ದಾಳೆ endu ಕರೆ ಮಾಡಿದ ವ್ಯಕ್ತಿ ತಿಳಿಸಿದ್ದ ಎನ್ನಲಾಗಿದೆ.
ಈ ಸಂದೇಶದಿಂದ ತಕ್ಷಣವೇ ಜಾಗೃತರಾದ ವಿಮಾನ ನಿಲ್ದಾಣ ಪ್ರಾಧಿಕಾರಗಳು ಹಾಗೂ ಕಾನೂನು ಜಾರಿ ಪ್ರಾಧಿಕಾರಿಗಳು, ವಿಮಾನ ನಿಲ್ದಾಣದಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದವು.
ಆಳವಾದ ತನಿಖೆಯ ಹೊರತಾಗಿಯೂ, ಕರೆ ಮಾಡಿದ್ದ ವ್ಯಕ್ತಿ ಬಣ್ಣಿಸಿದ್ದಂತಹ ಹೋಲಿಕೆ ಇರುವ ಪ್ರಯಾಣಿಕರು ಯಾವುದೇ ವಿಮಾನದಲ್ಲಿ ಪತ್ತೆಯಾಗಿಲ್ಲ. ಪೊಲೀಸರೊಂದಿಗೆ ಮುಂಬೈ ಮತ್ತು ದಿಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರಗಳು ಪ್ರಯಾಣಿಕರ ಪಟ್ಟಿಯ ಪರಾಮರ್ಶೆ ನಡೆಸಿದರೂ, ಮಾನವ ಬಾಂಬ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೆ ಮಾಡಿದ್ದ ವ್ಯಕ್ತಿ ನೀಡಿದ್ದ ವಿಳಾಸವನ್ನು ತಲುಪಿದ ಸಹರ್ ಠಾಣೆಯ ಪೊಲೀಸರಿಗೆ ಭರ್ವಾನಿ ತುಂಬಾ ಹಿಂದೆಯೆ ಅಂಧೇರಿಯನ್ನು ತೊರೆದಿರುವುದು ಪತ್ತೆಯಾಗಿದೆ. ಅವರನ್ನು ಸಂಪರ್ಕಿಸಿದಾಗ, ಆ ಮಹಿಳೆ ತಾನು ಎಂದೂ ವಿಮಾನ ಟಿಕೆಟ್ ಅನ್ನು ಕಾಯ್ದಿರಿಸಿಲ್ಲ ಎಂದು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ಟೋಬರ್ 14ರಿಂದ 25ರ ನಡುವೆ ಬಾಂಬ್ ಬೆದರಿಕೆ ಸಂಬಂಧ ಸಹರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 13ನೇ ಎಫ್ಐಆರ್ ಇದಾಗಿದೆ.