90,000ಕ್ಕೂ ಹೆಚ್ಚು ಬಡವರಿಗೆ ಪಡಿತರ ಚೀಟಿ ನಿರಾಕರಣೆ | ತನಿಖೆಗೆ ಆದೇಶಿಸಿದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್

Update: 2024-10-12 13:56 GMT

ದಿಲ್ಲಿ ಲೆಫ್ಟಿನೆಂಟ್ ಜನರಲ್ ವಿ.ಕೆ.ಸಕ್ಸೇನಾ | PC : PTI

ಹೊಸದಿಲ್ಲಿ: 90,000ಕ್ಕೂ ಹೆಚ್ಚು ಬಡಜನರಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗಿಲ್ಲ ಎಂಬ ವಿಧಾನಸಭಾ ವಿರೋಧ ಪಕ್ಷದ ನಾಯಕ ವಿಜಯೇಂದ್ರ ಗುಪ್ತರ ಮನವಿಯನ್ನು ಆಧರಿಸಿ, ಪಡಿತರ ಚೀಟಿ ವಿತರಣೆಯಲ್ಲಿ ವಿಫಲಗೊಂಡಿರುವ ನಗರಾಡಳಿತದ ವಿರುದ್ಧ ತನಿಖೆ ಕೈಗೊಳ್ಳುವಂತೆ ದಿಲ್ಲಿ ಲೆಫ್ಟಿನೆಂಟ್ ಜನರಲ್ ವಿ.ಕೆ.ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಬಿಜೆಪಿ ನಾಯಕ ವಿಜಯೇಂದ್ರ ಗುಪ್ತ ಶನಿವಾರ ಬಿಡುಗಡೆಗೊಳಿಸಿರುವ ಹೇಳಿಕೆಯ ಪ್ರಕಾರ, ದಿಲ್ಲಿಯಲ್ಲಿನ ಆಮ್ ಆದ್ಮಿ ಪಕ್ಷ ಸರಕಾರವು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಅಗತ್ಯಗಳನ್ನು ನಿರ್ಲಕ್ಷಿಸುತ್ತಿದ್ದು, ಸಾವಿರಾರು ಮಂದಿಯ ಆಹಾರದ ಹಕ್ಕನ್ನು ನಿರಾಕರಿಸಿದೆ ಎಂದು ಆರೋಪಿಸಲಾಗಿದೆ.

ಆಮ್ ಆದ್ಮಿ ಪಕ್ಷವನ್ನು ಬಡವರ ವಿರೋಧಿ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದ್ದು, ಪಡಿತರ ಚೀಟಿಗಳನ್ನು ಒದಗಿಸದೆ ಸಾವಿರಾರು ಬಾಯಿಗಳ ಆಹಾರದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆಪಾದಿಸಲಾಗಿದೆ.

“ಈ ಪರಿಸ್ಥಿತಿಯು ದಲಿತರು ಹಾಗೂ ಅಂಚಿನ ಸಮುದಾಯಗಳ ವಿರುದ್ಧ ನಡೆಯುತ್ತಿರುವ ಕಾರ್ಯಸೂಚಿಯನ್ನು ಪ್ರತಿಫಲಿಸುತ್ತಿದೆ” ಎಂದೂ ಗುಪ್ತ ಆರೋಪಿಸಿದ್ದಾರೆ. ಗುಪ್ತರ ಪ್ರಕಾರ, ಈ ವಿವಾದವು ಅಂತ್ಯೋದಯ ಅನ್ನ ಯೋಜನೆಯ ಸುತ್ತ ಕೇಂದ್ರೀಕೃತಗೊಂಡಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಜಾರಿಗೊಂಡಿದ್ದ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಕಡುಬಡತನದ ಕುಟುಂಬಗಳಿಗೆ ಗೋಧಿ, ಅಕ್ಕಿ, ಸಕ್ಕರೆ ಸೇರಿದಂತೆ 35 ಕೆಜಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಯೋಜನೆಯನ್ವಯ ರಾಷ್ಟ್ರ ರಾಜಧಾನಿಯ 1,56,800 ಕುಟುಂಬಗಳು ಈ ಯೋಜನೆಗೆ ಅರ್ಹವಾಗಬೇಕಿದೆ. ಆದರೆ, 2015ರಲ್ಲಿ ಆಪ್ ಸರಕಾರವು ಅಧಿಕಾರಕ್ಕೆ ಬಂದ ನಂತರ ಫಲಾನುಭವಿಗಳ ಸಂಖ್ಯೆಯು 76,458ರಿಂದ 66,532ಕ್ಕೆ ಕುಸಿದಿದೆ ಎಂದು ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News