2029ರ ಲೋಕಸಭಾ ಚುನಾವಣೆಯಲ್ಲಿಯೂ ಮಹಿಳಾ ಮೀಸಲಾತಿ ಜಾರಿ ಕಷ್ಟ, ಏಕೆ?
ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ವಕ್ತಾರ ಗುರ್ದೀಪ್ ಸಿಂಗ್ ಸಪ್ಪಾಲ್ ಅವರು, 2029ರ ಸಂಸದೀಯ ಚುನಾವಣೆಗಳವರೆಗೂ ಮೀಸಲಾತಿ ಜಾರಿಯಾಗುವುದು ಕಷ್ಟ ಎಂದು ಗಮನ ಸೆಳೆದಿದ್ದರು. ಲೋಕಸಭೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ ದುಬೆಯವರು ಮಾಡಿದ್ದ ಭಾಷಣವನ್ನು ಅವರು ಉಲ್ಲೇಖಿಸಿದ್ದರು. ದುಬೆ ತನ್ನ ಭಾಷಣದಲ್ಲಿ ಮಸೂದೆಯ ಜಾರಿಗೂ ಸಂವಿಧಾನದ 81(3) ಮತ್ತು 82ನೇ ವಿಧಿಗಳಿಗೂ ಸಂಬಂಧವನ್ನು ಕಲ್ಪಿಸಿದ್ದರು.
ಈ ವಿಧಿಗಳ ಅರ್ಥವೇನು? ಪ್ರಸ್ತುತ ಮಹಿಳಾ ಮೀಸಲಾತಿ ಮಸೂದೆಯು ಜನಗಣತಿ ಸಾಧ್ಯತೆ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗಳಿಗೆ ಸಂಬಂಧಿಸಿರುವುದರಿಂದ ಇವೆರಡೂ ವಿಧಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಕೇಂದ್ರ ಸರಕಾರವು 81ನೇ ವಿಧಿಯನ್ನು ತಿದ್ದುಪಡಿಗೊಳಿಸಲು ನಿರ್ಧರಿಸಿದರೆ ಅದು ಸ್ಥಾನಗಳ ಸಂಖ್ಯೆಯನ್ನೂ ಹೆಚ್ಚಿಸಬಹುದು.
81ನೇ ವಿಧಿಯು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾವಣೆ ಅಥವಾ ನಾಮ ನಿರ್ದೇಶನದ ಮೂಲಕ ಆಯ್ಕೆಯಾದ 20 ಸದಸ್ಯರಿಗೆ ಹೆಚ್ಚುವರಿಯಾಗಿ ನೇರ ಚುನಾವಣೆಯ ಮೂಲಕ ಲೋಕಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆಯನ್ನು 530ಕ್ಕೆ ನಿರ್ಬಂಧಿಸುತ್ತದೆ. 1971ರ ಜನಗಣತಿಯ ಆಧಾರದಲ್ಲಿ ಈ ಸ್ಥಾನಗಳನ್ನು ನಿರ್ಧರಿಸಲಾಗುವುದು ಎಂದು ವಿಧಿ 81 (3) ಹೇಳುತ್ತದೆ.
ಪ್ರಸ್ತುತ ಮಹಿಳಾ ಮೀಸಲಾತಿ ಮಸೂದೆಯ ಹಿನ್ನೆಲೆಯಲ್ಲಿ 82ನೇ ವಿಧಿಯು ಹೆಚ್ಚು ಮುಖ್ಯವಾಗುತ್ತದೆ. ಎಲ್ಲ ಪ್ರದೇಶಗಳಿಗೆ ನ್ಯಾಯಯುತ ಪ್ರಾತಿನಿಧ್ಯವನ್ನು ಖಚಿತಪಡಿಸಲು ಪ್ರತಿ ದಶಮಾನದ ಜನಗಣತಿಯ ಬಳಿಕವೇ ಸ್ಥಾನಗಳ ಮರುಹಂಚಿಕೆ (ಕ್ಷೇತ್ರ ಪುನರ್ವಿಂಗಡಣೆ)ಯನ್ನು ಮಾಡಬಹುದು ಎಂಬ ನಿಬಂಧನೆಯನ್ನು 82ನೇ ವಿಧಿಯು ಒಳಗೊಂಡಿದೆ.
ಭಾರತವು ಸ್ವತಂತ್ರಗೊಂಡ ಬಳಿಕ ಜನಗಣತಿಯ ಮೊದಲ ಕೆಲವು ಸುತ್ತುಗಳಿಗೆ ಅನುಸಾರವಾಗಿ ಲೋಕಸಭಾ ಸ್ಥಾನಗಳ ಮರುಹಂಚಿಕೆಗಾಗಿ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ರಚಿಸಲಾಗಿತ್ತು. ಆದರೆ 1976ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂಗೀಕರಿಸಲಾಗಿದ್ದ 42ನೇ ತಿದ್ದುಪಡಿಯು ಕ್ಷೇತ್ರ ಮರುವಿಂಗಡಣೆಯನ್ನು 2001 ಜನಗಣತಿಯವರೆಗೆ ಸ್ಥಗಿತಗೊಳಿಸಿತ್ತು. 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರವು ಜನಗಣತಿಯ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದ್ದರೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 2026ರವರೆಗೆ ಸ್ತಂಭನಗೊಳಿಸಿತ್ತು. ಹೀಗಾಗಿ ವಾಸ್ತವದಲ್ಲಿ 82ನೇ ವಿಧಿಯು 2026ರ ಜನಗಣತಿಗೆ ಮುನ್ನ ಕ್ಷೇತ್ರಗಳ ಯಾವುದೇ ಮರುವಿಂಗಡಣೆಯನ್ನು ನಿರ್ಬಂಧಿಸುತ್ತದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಜನಗಣತಿಯ ನಂತರ ಮಾತ್ರ ನಡೆಯಲಿದೆ. ತಮ್ಮ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಕೆಲವು ರಾಜ್ಯಗಳು ಲೋಕಸಭಾ ಪ್ರಾತಿನಿಧ್ಯದಲ್ಲಿ ಹಿಂದುಳಿಯುವುದಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಈ ಸ್ತಂಭನವನ್ನು ತರಲಾಗಿತ್ತು.
2001ರ ಜನಗಣತಿಯ ಬಳಿಕ ಕ್ಷೇತ್ರ ಮರುವಿಂಗಡಣೆ ಆಯೋಗವು 2009ರ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು ಲೋಕಸಭಾ ಕ್ಷೇತ್ರಗಳನ್ನು ಮರುಪರಿಶೀಲಿಸಿತ್ತಾದರೂ, ಅವುಗಳ ಸಂಖ್ಯೆಯನ್ನು ಹೆಚ್ಚಿಸಿರಲಿಲ್ಲ.
ಕೇಂದ್ರ ಸರಕಾರವು 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವುದನ್ನು ಸಂವಿಧಾನದ 81 ಮತ್ತು 82ನೇ ವಿಧಿಗಳು ತಡೆಯುತ್ತವೆ ಎಂದು ಬುಧವಾರ ತನ್ನ ಭಾಷಣದಲ್ಲಿ ದುಬೆ ಹೇಳಿದ್ದಾರೆ. ಅಂದರೆ ಮಹಿಳಾ ಮೀಸಲಾತಿಯು ಜಾರಿಗೊಳ್ಳುವ ಮುನ್ನ ಜನಗಣತಿ ಮತ್ತು ನಂತರ ಇನ್ನೊಂದು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಡೆಯುವುದು ಅಗತ್ಯವಾಗಿದೆ.
ಆದರೆ 2029ರ ಲೋಕಸಭಾ ಚುನಾವಣೆಯಲ್ಲಾದರೂ ಮೀಸಲಾತಿ ಜಾರಿಗೊಳ್ಳುವ ಸಾಧ್ಯತೆ ಏನು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. 2029ರಲ್ಲಿ ಮೀಸಲಾತಿ ಜಾರಿಗೊಳ್ಳುವ ಸಾಧ್ಯತೆಯಿಲ್ಲ ಎನ್ನುವುದು ಹೆಚ್ಚಿನ ತಜ್ಞರ ಅಭಿಪ್ರಾಯವಾಗಿದೆ.
2011ರ ಜನಗಣತಿಯ ಅಂತಿಮ ವರದಿಯನ್ನು ಎರಡು ವರ್ಷಗಳ ಕಾಯುವಿಕೆಯ ಬಳಿಕ 2013ರಲ್ಲಷ್ಟೇ ಪ್ರಕಟಿಸಲಾಗಿತ್ತು. ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಂದೂಡಲ್ಪಟ್ಟ 2021ರ ಜನಗಣತಿಯನ್ನು ಕೈಗೊಳ್ಳಲು ಕೇಂದ್ರ ಸರಕಾರವು ಈವರೆಗೆ ಯಾವುದೇ ನಿರ್ದಿಷ್ಟ ಗಡುವನ್ನು ನೀಡಿಲ್ಲ.
ಕೇಂದ್ರ ಸರಕಾರವು 2024ರ ಮಧ್ಯಭಾಗದಲ್ಲಿ ಜನಗಣತಿಯನ್ನು ಆರಂಭಿಸಲಿದೆ ಎಂದು ಲೋಕಸಭೆಯಲ್ಲಿ ಚರ್ಚೆಯ ಸಂದರ್ಭ ಕೇಂದ್ರ ಗೃಹಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡರೆ ಅಂತಿಮ ವರದಿಯನ್ನು 2026ರ ವೇಳೆಗೆ ಮಾತ್ರ ನಿರೀಕ್ಷಿಸಬಹುದು. ನಂತರವಷ್ಟೇ ಕ್ಷೇತ್ರ ಮರುವಿಂಗಡಣೆ ಆಯೋಗವು ಲೋಕಸಭಾ ಸ್ಥಾನಗಳ ಮರುಹಂಚಿಕೆಗಾಗಿ ತನ್ನ ಕಾರ್ಯವನ್ನು ಆರಂಭಿಸುತ್ತದೆ ಮತ್ತು ಕನಿಷ್ಠ ಇನ್ನೊಂದು ನಾಲ್ಕೈದು ವರ್ಷಗಳನ್ನು ತೆಗೆದುಕೊಳ್ಳಬಹುದು. ಅಂದರೆ 2029ರ ಲೋಕಸಭಾ ಚುನಾವಣೆಗಳಲ್ಲಿಯೂ ಮಹಿಳಾ ಮೀಸಲಾತಿ ಜಾರಿಗೊಳ್ಳುವ ಸಾಧ್ಯತೆಯಿಲ್ಲ.
ಇದು ಚುನಾವಣೆಯಲ್ಲಿ ಆಯ್ಕೆಗೊಂಡ ತಕ್ಷಣ ಜನಗಣತಿಯನ್ನು ಆರಂಭಿಸುವ ತನ್ನ ಭರವಸೆಯನ್ನು ಕೇಂದ್ರ ಸರಕಾರವು ಜಾರಿಗೆ ತರಲು ಹೊರಟರೆ ಮಾತ್ರ ಮಸೂದೆ ಕಾರ್ಯರೂಪಕ್ಕೆ ಬರಬಹುದು.
‘ವಾಸ್ತವದಲ್ಲಿ ಲೋಕಸಭೆಯಲ್ಲಿ ಶೇ.33ರಷ್ಟು ಮಹಿಳೆಯರು ಯಾವಾಗ ಆಸೀನರಾಗುತ್ತಾರೆ ಎನ್ನುವುದು ನಮಗೆ ತಿಳಿದಿಲ್ಲ. ಮುಂದಿನ ಜನಗಣತಿಯ ದಿನಾಂಕವು ಸಂಪೂರ್ಣವಾಗಿ ಅನಿರ್ದಿಷ್ಟವಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ಅನಿರ್ದಿಷ್ಟವಾಗಿದೆ. ಮಹಿಳಾ ಮೀಸಲಾತಿಯು ಕ್ಷೇತ್ರ ಮರುವಿಂಗಡನೆಯನ್ನು ಅವಲಂಬಿಸಿದೆ. ಇದಕ್ಕಿಂತ ದೊಡ್ಡ ಪೊಳ್ಳು ಭರವಸೆ ಬೇರೊಂದಿರಲು ಸಾಧ್ಯವೇ? 2024ನ್ನು ಮರೆತುಬಿಡಿ, 2029ರಲ್ಲಿಯೂ ಮೀಸಲಾತಿ ಜಾರಿ ಸಾಧ್ಯವಾಗದಿರಬಹುದು’ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಕೇತ್ರ ಮರುವಿಂಗಡಣೆ ಪ್ರಕ್ರಿಯೆ ವರದಿ 2027ರ ವೇಳೆಗಷ್ಟೇ ಕೈಸೇರಬಹುದು. ಅಲ್ಲದೆ ಜನಸಂಖ್ಯಾ ಅನುಪಾತ ಬದಲಾವಣೆಗಳಿಂದಾಗಿ ಈ ಪ್ರಕ್ರಿಯೆ ಅತ್ಯಂತ ವಿವಾದಾತ್ಮಕವೂ ಆಗಬಹುದು. ಹೀಗಾಗಿ 2029ರಲ್ಲೂ ಮೀಸಲಾತಿ ಜಾರಿಗೊಳ್ಳುವುದು ಅನುಮಾನ ಎಂದು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು X ಪೋಸ್ಟ್‌ನಲ್ಲಿ ಬರೆದಿದ್ದಾರೆ. ಹಲವು ರಾಜಕೀಯ ವಿಶ್ಲೇಷಕರೂ ಇಂತಹುದೇ ಅಭಿಪ್ರಾಯಗಳನ್ನು ಹೊಂದಿದ್ದಾರೆ.
ಕೃಪೆ : ದ ವೈರ್