ಇವಿಎಮ್‌ಗಳ ನೂತನ ವಿನ್ಯಾಸವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಡಿಎಂಕೆ

Update: 2024-04-03 11:28 GMT

Photo: PTI 

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಗಳಿಗೆ ಮುನ್ನ ಮೂರನೇ ಪೀಳಿಗೆಯ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳ ವಿನ್ಯಾಸವನ್ನು ಪ್ರಶ್ನಿಸಿ ಡಿಎಂಕೆ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.

ನೂತನ ಮಾದರಿಯಲ್ಲಿ ಮತಯಂತ್ರ ಮತ್ತು ನಿಯಂತ್ರಣ ಘಟಕಗಳ ನಡುವೆ ವಿವಿಪ್ಯಾಟ್ ಅನ್ನು ಇರಿಸಲಾಗಿದ್ದು,ಇದು ಚುನಾವಣೆಗಳಲ್ಲಿ ವ್ಯತ್ಯಾಸಗಳು ಮತ್ತು ಭ್ರಷ್ಟ ಪದ್ಧತಿಗಳಿಗೆ ದಾರಿ ಮಾಡಿಕೊಡಬಹುದು ಎಂದು ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ. ವಿವಿಪ್ಯಾಟ್‌ನಲ್ಲಿ ಸಿಂಬಲ್ ಲೋಡಿಂಗ್ ಯುನಿಟ್ (ಎಸ್‌ಎಲ್‌ಯು)ವನ್ನು ಅಳವಡಿಸಿರುವುದು ಚುನಾವಣಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಅರ್ಜಿಯು ಬೆಟ್ಟು ಮಾಡಿದೆ.

1961 ಚುನಾವಣಾ ನಿಯಮಗಳಂತೆ ಇವಿಎಮ್‌ನ ಮತಯಂತ್ರ ಮತ್ತು ನಿಯಂತ್ರಣ ಘಟಕ ಪರಸ್ಪರ ನೇರ ಸಂಪರ್ಕದಲ್ಲಿರಬೇಕು,ವಿವಿಪ್ಯಾಟ್‌ನ್ನು ಇವುಗಳ ನಡುವೆ ಇರಿಸುವುದು 49ಎ,49ಬಿ(4),49ಇ ಮತ್ತು 49ಟಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಡಿಎಂಕೆ ಅರ್ಜಿಯಲ್ಲಿ ವಾದಿಸಿದೆ.

ಪ್ರಿಂಟರ್‌ನ್ನು ಮಧ್ಯದಲ್ಲಿ ಇರಿಸಿದರೆ ಅದು ನಿಯಂತ್ರಣ ಘಟಕಕ್ಕೆ ಡೇಟಾವನ್ನು ರವಾನಿಸುತ್ತದೆ ,ಇದರಿಂದಾಗಿ ಮತದ ದಾಖಲೀಕರಣವು ಪ್ರಿಂಟಿಂಗ್ ಯೂನಿಟ್ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಮತಯಂತ್ರದಿಂದ ಪ್ರಿಂಟರ್ ಸ್ವೀಕರಿಸಿದ ಸಿಗ್ನಲ್‌ ಅನ್ನು ಕಾಯ್ದುಕೊಳ್ಳಲಾಗುತ್ತದೆ ಎನ್ನುವುದಕ್ಕೆ ಯಾವುದೇ ಖಾತರಿ ಇರುವುದಿಲ್ಲ. ಹೀಗಾಗಿ ಇಂತಹ ಅಳವಡಿಕೆಯು ಋಜುತ್ವದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಮೂಲಕ ಡೇಟಾದ ತಿರುಚುವಿಕೆಯನ್ನು ಸಾಧ್ಯವಾಗಿಸಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News