ಗಣಪತಿ ಪೂಜೆಗೆ ಸಿಜೆಐ ಚಂದ್ರಚೂಡ್ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ

Update: 2024-09-12 06:59 GMT

Photo: PTI

ಹೊಸದಿಲ್ಲಿ: ಗಣಪತಿ ಪೂಜೆಗೆ ಸಿಜೆಐ ಡಿ ವೈ ಚಂದ್ರಚೂಡ್ ಅವರ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದಕ್ಕೆ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಸಿಜೆಐ ನಮಗೆ ನ್ಯಾಯ ಕೊಡುವರೇ ಎಂಬ ಬಗ್ಗೆ ಅನುಮಾನವಿದೆ ಎಂದು ಹೇಳಿದ್ದಾರೆ.

ಎಎನ್ಐ ಜೊತೆ ಮಾತನಾಡಿದ ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್, ಗಣಪತಿ ಹಬ್ಬ ನಡೆಯುತ್ತಿದೆ, ಜನರು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ. ಪ್ರಧಾನಿ ಇದುವರೆಗೆ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂಬುವುದರ ಕುರಿತು ನನಗೆ ಮಾಹಿತಿ ಇಲ್ಲ. ಆದರೆ, ಪ್ರಧಾನಿ ಸಿಜೆಐ ಮನೆಗೆ ಹೋಗಿ ಇಬ್ಬರು ಜೊತೆಯಾಗಿ ಆರತಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಂವಿಧಾನದ ಪಾಲಕರು ರಾಜಕಾರಣಿಗಳನ್ನು ಭೇಟಿಯಾಗುವುದು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುತ್ತದೆ. ನಮ್ಮ ಪ್ರಕರಣದಲ್ಲಿ, ಎದುರು ಪಕ್ಷವು ಕೇಂದ್ರ ಸರ್ಕಾರವಾಗಿದೆ. ಮುಖ್ಯ ನ್ಯಾಯಾಧೀಶರು ಈ ಪ್ರಕರಣದಿಂದ ದೂರವಿರಬೇಕು. ಏಕೆಂದರೆ, ಪ್ರಕರಣದಲ್ಲಿ ಎದುರು ಪಕ್ಷದ ಜೊತೆ ಸಿಜೆಐ ಅವರ ಸಂಬಂಧವು ಬಹಿರಂಗವಾಗಿ ಗೋಚರಿಸುತ್ತಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸಿಜೆಐ ನಮಗೆ ನ್ಯಾಯ ನೀಡಲು ಸಾಧ್ಯವೇ? ಪ್ರಕರಣದ ವಿಚಾರಣೆಯನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಶಿವಸೇನೆ ಮತ್ತು ಎನ್ಸಿಪಿಯನ್ನು ಇಬ್ಭಾಗ ಮಾಡಲಾಗಿದೆ. ನಮಗೆ ನ್ಯಾಯ ಸಿಗುತ್ತಿಲ್ಲ ಮತ್ತು ಮಹಾರಾಷ್ಟ್ರದ ಅಕ್ರಮ ಸರ್ಕಾರದ ರಕ್ಷಣೆಗೆ ಪ್ರಧಾನಿ ಮೋದಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ . ಪ್ರಧಾನಮಂತ್ರಿ ಮತ್ತು ಸಿಜೆಐ ನಡುವಿನ ಸಂಬಂಧಗಳ ಬಗ್ಗೆ ಮಹಾರಾಷ್ಟ್ರದ ಜನರಲ್ಲಿ ಸಂದೇಹ ರೂಪುಗೊಂಡಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News