ಜಾತಿ, ಧರ್ಮಗಳನ್ನು ಪ್ರಚಾರದಿಂದ ದೂರವಿರಿಸಿ: ಕಾಂಗ್ರೆಸ್‌, ಬಿಜೆಪಿಗೆ ಚುನಾವಣಾ ಆಯೋಗ ತಾಕೀತು

Update: 2024-05-22 11:50 GMT
ಚುನಾವಣಾ ಆಯೋಗ | PC : PTI 

ಹೊಸದಿಲ್ಲಿ: ಜಾತಿ, ಮತ, ಭಾಷೆ ಮತ್ತು ಧರ್ಮದ ಆಧಾರದಲ್ಲಿ ಪ್ರಚಾರ ನಡೆಸದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಚುನಾವಣಾ ಆಯೋಗ ಬುಧವಾರ ಸೂಚನೆ ನೀಡಿದೆಯಲ್ಲದೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಚುನಾವಣೆಗಳಿಗೆ ಬಲಿಯಾಗುವಂತೆ ಮಾಡಬಾರದು ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬಾನಸ್ವಾರ ಎಂಬಲ್ಲಿ ನೀಡಿದ್ದ ವಿಭಜನಾತ್ಮಕ ಭಾಷಣದ ನಂತರ ಚುನಾವಣಾ ಆಯೋಗ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನೋಟಿಸ್‌ ಜಾರಿಗೊಳಿಸಿತ್ತು. ಪಕ್ಷದ ತಾರಾ ಪ್ರಚಾರಕರು ಧರ್ಮ ಮತ್ತು ಕೋಮು ವಿಚಾರಗಳನ್ನು ಪ್ರಚಾರದಿಂದ ದೂರವಿರಿಸಬೇಕು ಎಂದು ಆಯೋಗ ಹೇಳಿದೆ.

ನಡ್ಡಾ ಜೊತೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ನೋಟಿಸ್‌ ನೀಡಿದ್ದ ಆಯೋಗ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಹಿತ ಇತರರ ಹೇಳಿಕೆಗಳ ಬಗ್ಗೆ ಆಕ್ಷೇಪಿಸಿತ್ತು.

ಬಿಜೆಪಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷರಿಬ್ಬರ ಪ್ರತಿಕ್ರಿಯೆಯನ್ನೂ ನಿರಾಕರಿಸಿರುವ ಆಯೋಗ ಸಮಾಜವನ್ನು ಒಡೆಯುವಂತಹ ಹೇಳಿಕೆಗಳನ್ನು ನೀಡದಂತೆ ಮತ್ತು ಧರ್ಮ ಮತ್ತು ಕೋಮು ವಿಚಾರಗಳನ್ನು ಪ್ರಚಾರದಿಂದ ದೂರವಿರಿಸುವಂತೆ ಹೇಳಿದೆ. ಸಂವಿಧಾನವನ್ನು ರದ್ದುಗೊಳಿಸಬಹುದು ಎಂಬಂತಹ ತಪ್ಪು ಅಭಿಪ್ರಾಯ ನೀಡುವಂತಹ ಹೇಳಿಕೆಗಳನ್ನು ನೀಡದಂತೆಯೂ ಆಯೋಗ ಕಾಂಗ್ರೆಸ್‌ ಪಕ್ಷಕ್ಕೆ ಸೂಚಿಸಿದೆ.

ತಮ್ಮ ತಾರಾ ಪ್ರಚಾರಕರಿಗೆ ಪ್ರಚಾರ ಭಾಷಣಗಳ ಕುರಿತಂತೆ ಎಚ್ಚರಿಕೆಯಿಂದಿರುವಂತೆ ಸೂಚಿಸುವಂತೆ ಎರಡೂ ಪಕ್ಷಗಳ ಅಧ್ಯಕ್ಷರಿಗೆ ಆಯೋಗ ಹೇಳಿದೆ.

 ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News