ಮೋದಿ ಬಗೆಗಿನ ಭೀತಿಯನ್ನು ಚುನಾವಣಾ ಫಲಿತಾಂಶ ಅಳಿಸಿ ಹಾಕಿದೆ: ರಾಹುಲ್ ಗಾಂಧಿ
ಡಲ್ಲಾಸ್ (ಅಮೆರಿಕ): ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಮೇಲೆ ಅಮೆರಿಕದಲ್ಲಿ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇದ್ದ ಭೀತಿಯನ್ನು 2024ರ ಚುನಾವಣಾ ಫಲಿತಾಂಶ ಅಳಿಸಿಹಾಕಿದೆ" ಎಂದು ಹೇಳಿದ್ದಾರೆ.
ವರ್ಜೀನಿಯಾದ ಹೆರ್ನ್ಡಾನ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, "ಬಿಜೆಪಿ ಹಾಗೂ ನರೇಂದ್ರ ಮೋದಿ ಸಣ್ಣ ಉದ್ಯಮಿಗಳಲ್ಲಿ ತನಿಖಾ ಏಜೆನ್ಸಿ ಬಗೆಗಿನ ಭೀತಿ ಹಾಗೂ ಒತ್ತಡವನ್ನು ಹೇರಿದ್ದರು. ಆದರೆ ಎಲ್ಲವೂ ಕೆಲವೇ ಸೆಕೆಂಡುಗಳಲ್ಲಿ ಅಳಿಸಿಹೋದವು" ಎಂದರು.
"ಚುನಾವಣೆ ಬಳಿಕ ಸ್ವಲ್ಪಮಟ್ಟಿಗೆ ಬದಲಾವಣೆಯಾಗಿದೆ. ನಮಗೆ ಈಗ ಯಾರ ಭೀತಿಯೂ ಇಲ್ಲ. ಹೆದರಿಕೆ ಇದೀಗ ಹೋಗಿದೆ (ಡರ್ ನಹಿ ಲಗ್ತಾ ಅಬ್ ಡರ್ ನಿಕಾಲ್ ಗಯಾ ಅಬ್) ಎಂದು ಜನ ಹೇಳುತ್ತಿದ್ದಾರೆ. ಬಿಜೆಪಿ ಹಾಗೂ ಮೋದಿ ಸಣ್ಣ ಉದ್ಯಮಿಗಳ ಮೇಲೆ ಹೇರಿದ್ದ ಏಜೆನ್ಸಿಗಳ ಭೀತಿ ಮತ್ತು ಒತ್ತಡ ಕೆಲವೇ ಸೆಕೆಂಡುಗಳಲ್ಲಿ ಅಳಿಸಿಹೋಗಿರುವುದು ಕುತೂಹಲಕಾರಿ ಅಂಶ. ಈ ಭೀತಿಯನ್ನು ಹರಡಲು ಅವರಿಗೆ ಹಲವು ವರ್ಷ ಬೇಕಾಯಿತು" ಎಂದು ಹೇಳಿದರು.
"ಸಂಸತ್ತಿನಲ್ಲಿ ಪಕ್ಕದಲ್ಲೇ ಮುಂದಿನ ಸಾಲಿನ ಬಲಭಾಗದಲ್ಲಿ ನಾನು ಪ್ರಧಾನಿಯನ್ನು ನೋಡುತ್ತಿದ್ದೇನೆ. ಮೋದಿಯವರ ಯೋಚನೆಗಳು, 56 ಇಂಚಿನ ಎದೆ, ದೇವರ ಜತೆಗಿನ ನೇರ ಸಂಬಂಧ ಎಲ್ಲವೂ ಇದೀಗ ಅಳಿಸಿಹೋಗಿದೆ. ಎಲ್ಲವೂ ಈಗ ಇತಿಹಾಸ" ಎಂದು ವ್ಯಂಗ್ಯವಾಡಿದರು.