ಲೋಕಸಭೆ ಚುನಾವಣೆ ಹಿನ್ನೆಲೆ: ಈರುಳ್ಳಿ, ಸಕ್ಕರೆ ಬೆಲೆ ನಿಯಂತ್ರಣಕ್ಕೆ ಕ್ರಮ
ಹೊಸದಿಲ್ಲಿ: ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಇವುಗಳ ಲಭ್ಯತೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 2023-24ನೇ ಹಣಕಾಸು ವರ್ಷದಲ್ಲಿ ಈರುಳ್ಳಿ ಮತ್ತು ಸಕ್ಕರೆಯ ರಫ್ತನ್ನು ನಿಷೇಧಿಸಲಾಗಿದ್ದು, ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಗೆ ಕಬ್ಬಿನ ರಸ ಅಥವಾ ಸಿರಪ್ ಬಳಸುವುದನ್ನು ಕೂಡಾ ನಿರ್ಬಂಧಿಸಲಾಗಿದೆ.
ಇದರ ಜತೆಗೆ ಹಾಲಿ ಇರುವ 3 ಲಕ್ಷ ಟನ್ ಬದಲಾಗಿ ಪ್ರತಿ ತಿಂಗಳು 4 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಾರತದ ಆಹಾರ ನಿಗಮಕ್ಕೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ದೇಶದಲ್ಲಿ ಹಣದುಬ್ಬರ ಪ್ರಮಾಣ ನಾಲ್ಕು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ ಸುಮಾರು ಶೇಕಡ 5ಕ್ಕೆ ಇಳಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
ವಿತ್ತೀಯ ನೀತಿ ಸಮಿತಿಯ ಸಭೆಗೆ ಪೂರ್ವಭಾವಿಯಾಗಿ ಹಾಗೂ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಡೆಗೆ ಕೇಂದ್ರ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬೆಲೆ ಏರಿಕೆಯ ಪ್ರತಿಕೂಲ ಅಂಶಗಳು ಚುನಾವಣಾ ವರ್ಷದಲ್ಲಿ ಪಕ್ಷದ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಈರುಳ್ಳಿಗೆ ಕನಿಷ್ಠ ರಫ್ತು ಬೆಲೆಯನ್ನು ಪ್ರತಿ ಟನ್ ಗೆ 800 ಡಾಲರ್ ಗೆ ನಿಗದಿಪಡಿಸಿತ್ತು. ಜತೆಗೆ ಸಕ್ಕರೆ ರಫ್ತಿನ ಮೇಲೆಯೂ ನಿರ್ಬಂಧಗಳನ್ನು ವಿಧಿಸಿ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿತ್ತು.