ಗುಜರಾತ್ | ಆಭರಣ ವ್ಯಾಪಾರಿ ನಿವಾಸದ ಮೇಲೆ ದಾಳಿ ನಡೆಸಿದ "ನಕಲಿ ED ತಂಡ" : ಚಿನ್ನಾಭರಣ, ನಗದು ಜೊತೆ ಪರಾರಿ

Update: 2024-12-09 16:31 GMT

Pic | x /@GuptaJi_Journo

ಗಾಂಧಿನಗರ : ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳ ಸೋಗಿನಲ್ಲಿ ಆಭರಣ ವ್ಯಾಪಾರಿಯ ನಿವಾಸಕ್ಕೆ ʼನಕಲಿ ದಾಳಿʼ ಮಾಡಿ 25 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದ ನಕಲಿ ಈಡಿ ಅಧಿಕಾರಿಗಳ ತಂಡವನ್ನು ಗುಜರಾತ್ ನ ಕಚ್ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಯು ಅಕ್ಷಯ್ ಕುಮಾರ್ ಅಭಿನಯದ ʼಸ್ಪೆಷಲ್ 26ʼ ಬಾಲಿವುಡ್ ಚಲನಚಿತ್ರದ ಕಥೆಯಂತೆಯೇ ಇದ್ದು, ಡಿ.2ರಂದು ಆಭರಣ ವ್ಯಾಪಾರಿಯೊಬ್ಬರ ಮನೆಗೆ ಈಡಿ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಳಿ ನಡೆಸಿ 25 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಲಾಗಿದೆ. ಘಟನೆಗೆ ಸಂಬಂಧಿಸಿ 12 ಆರೋಪಿಗಳ ತಂಡವನ್ನು ಕಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.

ಆರೋಪಿಗಳ ಮೆರವಣಿಗೆ ಮತ್ತು ನಕಲಿ ಈಡಿ ದಾಳಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವೀಡಿಯೊದಲ್ಲಿ ನಕಲಿ ಈಡಿ ಅಧಿಕಾರಿ ಉದ್ಯಮಿಗೆ ಬೆದರಿಸಲು ತನ್ನ ನಕಲಿ ಗುರುತಿನ ಚೀಟಿಯನ್ನು ತೋರಿಸಿದ್ದಾನೆ. ಬಳಿಕ ಆತನಿಂದ ಬ್ಯಾಂಕ್ ಖಾತೆಯ ವಿವರವಾದ ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದಾನೆ. ತನಿಖೆಗೆ ಸಹಕರಿಸದಿದ್ದರೆ ಜೈಲಿಗೆ ಕಳುಹಿಸುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಈ ವೇಳೆ ಹೆದರಿಕೊಂಡ ಉದ್ಯಮಿ ತನ್ನ ಬಳಿ ಇರುವ ಹಣದ ಬಗ್ಗೆ ಸರಿಯಾದ ಲೆಕ್ಕಾಚಾರ ತಿಳಿದಿಲ್ಲ ಎಂದು ಹೇಳಿದ್ದಾನೆ. ಆಗ ಸರಿಯಾದ ಅಂಕಿ-ಅಂಶಗಳನ್ನು ಹೇಳಲು 15 ನಿಮಿಷ ಕೊಡುವುದಾಗಿ ಹೇಳಿದ್ದಾನೆ. ವೀಡಿಯೊದಲ್ಲಿ ಉದ್ಯಮಿ ಕುಟುಂಬದ ಸದಸ್ಯರ ಜೊತೆ ಕುಳಿತಿರುವುದು, ಆತಂಕಕ್ಕೆ ಒಳಗಾಗಿರುವುದು ಕಂಡು ಬಂದಿದೆ. ವಂಚಕರು ಅದೇ ಸಮಯದಲ್ಲಿ ಗಾಂಧಿಧಾಮ್‌ ನಲ್ಲಿರುವ ಅವರ ರಾಧಿಕಾ ಜ್ಯುವೆಲರ್ಸ್ ಅಂಗಡಿ ಮೇಲೂ ದಾಳಿ ನಡೆಸಿದ್ದಾರೆ. ಅಲ್ಲಿಂದ  25 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಜೊತೆ ಪರಾರಿಯಾಗಿದ್ದಾರೆ.

ಈ ಕುರಿತು ಗಾಂಧಿಧಾಮ ವಿಭಾಗ-ಎ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಪರಾಧ ನಡೆದ ಸ್ಥಳಕ್ಕೆ ತನಿಖೆಗೆ ಕರೆದೊಯ್ಯುವಾಗ ಗಾಂಧಿಧಾಮ್ ಮಾರುಕಟ್ಟೆಯಲ್ಲಿ ಪೊಲೀಸರು ನಕಲಿ ಈಡಿ ಅಧಿಕಾರಿಗಳನ್ನು ಮೆರವಣಿಗೆ ನಡೆಸಿದ್ದಾರೆ. ಬಂಧಿತ ಆರೋಪಿಗಳಿಂದ 45 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಎಸ್ಪಿ ಸಾಗರ್ ಬಾಗ್ಮಾರ್ ಮಾಹಿತಿಯನ್ನು ನೀಡಿದ್ದು, ಘಟನೆ ಬಗ್ಗೆ ದೂರು ಬಂದ ತಕ್ಷಣ ಪೊಲೀಸರು ಹಲವು ತಂಡಗಳನ್ನು ರಚಿಸಿ ಗಾಂಧಿಧಾಮ್, ಭುಜ್, ಅಹಮದಾಬಾದ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದಾಳಿ ಮಾಡಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಈಡಿ ಅಧಿಕಾರಿಗಳ ಸೋಗಿನಲ್ಲಿದ್ದ ಶೈಲೇಂದ್ರ ದೇಸಾಯಿ ಎಂಬಾತ ಕೃತ್ಯದ ಪ್ರಮುಖ ರುವಾರಿ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News