ಅಸ್ಸಾದ್ ಗಳ ಪತನ | ಸುನ್ನಿ ರಾಷ್ಟ್ರ ಸಿರಿಯಾವನ್ನು ಅಲವೈಟ್ ಕುಟುಂಬ ದಶಕಗಳ ಕಾಲ ಆಳಿದ್ದು ಹೇಗೆ?

Update: 2024-12-08 16:22 GMT

PC : NDTV 

ಡಮಾಸ್ಕಸ್: ಸಿರಿಯಾವನ್ನು ಅಸ್ಸಾದ್ ಗಳು ದಶಕಗಳ ಕಾಲ ಆಳಿದರು. ರವಿವಾರ ನಡೆದ ಕಾರ್ಯಾಚರಣೆಯಲ್ಲಿ ಬಂಡುಕೋರರು ಅವರನ್ನು ಡಮಾಸ್ಕಸ್ ಶಕ್ತಿಪೀಠದಿಂದ ಪದಚ್ಯುತಗೊಳಿಸಿದ್ದಾರೆ. ಹೀಗಾಗಿ, ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ದೇಶ ಬಿಟ್ಟು ಪರಾರಿಯಾಗಿದ್ದು, ಇದರಿಂದ ಸಿರಿಯಾದಲ್ಲಿ ಅಸ್ಸಾದ್ ಗಳ ಕೌಟುಂಬಿಕ ಆಡಳಿತ ಅಂತ್ಯಗೊಂಡಿದೆ.

ಸುನ್ನಿ ಬಾಹುಳ್ಯದ ಸಿರಿಯಾ ಮೇಲೆ ಅಲವೈಟ್ ರಾಜವಂಶವು ದಶಕಗಳ ಕಾಲ ಹಿಡಿತ ಹೊಂದಿತ್ತು. 1970ರಲ್ಲಿ ಹಫೀಝ್-ಅಲ್-ಅಸ್ಸಾದ್ ರಿಂದ ಪ್ರಾರಂಭಗೊಂಡಿದ್ದ ಈ ಸುದೀರ್ಘ ಆಡಳಿತ, ಇದೀಗ ದಿಢೀರನೆ ಅಂತ್ಯಗೊಂಡಿದೆ.

►ಆಧುನಿಕ ಸಿರಿಯಾ ಶಿಲ್ಪಿ ಹಫೀಝ್ ಅಲ್-ಅಸ್ಸಾದ್:

ನವೆಂಬರ್ 13, 1970ರಲ್ಲಿ ಕ್ಷಿಪ್ರ ಕ್ರಾಂತಿಯ ಮೂಲಕ ಹಫೀಝ್ ಅಲ್-ಅಸ್ಸಾದ್ ಅಧಿಕಾರಕ್ಕೇರುವ ಮೂಲಕ ಸಿರಿಯಾದಲ್ಲಿ ನೂತನ ಶಕೆ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ನಡೆದಿದ್ದ ಸರಣಿ ಕ್ಷಿಪ್ರ ಕ್ರಾಂತಿಗಳು ಸ್ವಾತಂತ್ರ್ಯೋತ್ತರ ಇತಿಹಾಸದ ಮೇಲೆ ಪ್ರಾಬಲ್ಯ ಸಾಧಿಸಿದ್ದವು. ಆಗ ಅಲವೈಟ್ ಸಮುದಾಯದ ಸದಸ್ಯರಾದ ಹಫೀಝ್, ಸಿರಿಯಾ ವಾಯು ಪಡೆ ಹಾಗೂ ರಕ್ಷಣಾ ಸಚಿವರಾಗಿ ತಮ್ಮ ಅಧಿಕಾರದ ನೆಲೆಯನ್ನು ನಿರ್ಮಿಸಿಕೊಂಡಿದ್ದರು. ಅವರು ಸಿರಿಯಾ ಅಧಿಕಾರವನ್ನು ಕೈವಶ ಮಾಡಿಕೊಂಡ ವೇಳೆ ಸೇನೆ ಹಾಗೂ ಬಾತ್ ಪಕ್ಷದಲ್ಲಿ ನಿಷ್ಠ ಜಾಲವನ್ನು ಬೆಳೆಸಿದರು.

ಹಫೀಝ್ ರ ಕಾರ್ಯತಂತ್ರವು ಸಿರಿಯಾದ ಜನಾಂಗೀಯ, ಧಾರ್ಮಿಕ ಹಾಗೂ ರಾಜಕೀಯ ವಿಭಜನೆಗಳ ಲಾಭ ಪಡೆಯುವ ಒಡೆದು ಆಳುವ ತಂತ್ರವನ್ನು ಒಳಗೊಂಡಿತ್ತು. ದೇಶವನ್ನು ಒಗ್ಗಟ್ಟಾಗಿಡುವಲ್ಲಿ ಈ ವ್ಯವಸ್ಥೆ ನಿರ್ಣಾಯಕ ಪಾತ್ರ ವಹಿಸಿತ್ತು. ಅದರ ಪರಿಣಾಮವಾಗಿ ರೂಪುಗೊಂಡ ದುರ್ಬಲ ಸಾಂಸ್ಥಿಕ ರಚನೆಯು ಅವರ ಉತ್ತರಾಧಿಕಾರಿಗಳ ಪಾಲಿಗೆ ಸುಲಭ ಬುನಾದಿಯಾಯಿತು.

ತಮ್ಮ ಆಡಳಿತವನ್ನು ಸುಭದ್ರಗೊಳಿಸಿಕೊಳ್ಳಲು ಪಾರಂಪರಿಕವಾಗಿ ಅಂಚಿನ ಸಮುದಾಯವಾದ ಅಲವೈಟ್ ಸಮುದಾಯವನ್ನು ಸೇನಾಪಡೆ ಹಾಗೂ ಸರಕಾರದ ಹುದ್ದೆಗಳಿಗೇರಿಸಿದರು. ಇದೇ ವೇಳೆ, ಪ್ರಬಲ ಬೆದರಿಕೆಗಳನ್ನು ಹತ್ತಿಕ್ಕಲು ಹಾಗೂ ತಮ್ಮ ಅಧಿಕಾರವನ್ನು ಯಾವುದೇ ಗುಂಪು ಕೂಡಾ ಪ್ರಶ್ನಿಸದಂತೆ ಮಾಡಲು ಸಿರಿಯಾದ ವರ್ಗಭೇದ ಹಾಗೂ ಬುಡಕಟ್ಟು ಅಪರಾಧಿ ಗುಂಪುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು.

1946ರ ಸಿರಿಯಾ ಸ್ವಾತಂತ್ರ್ಯದ ನಂತರ, ರಾಜಕೀಯ ಚಳವಳಿಗಳು ಹಾಗೂ ಸಶಸ್ತ್ರ ಪಡೆಗಳು ಎಂಬ ಎರಡು ಪ್ರಮುಖ ವಲಯಗಳಲ್ಲಿ ಅಲವೈಟ್ ಸಮುದಾಯ ಮಹತ್ವದ ಶಕ್ತಿಯಾಗಿ ಉದ್ಭವಿಸಿತು. ಈ ಸ್ಥಿತ್ಯಂತರದಿಂದ ಸಿರಿಯಾದ ಅಧಿಕಾರ ಕೇಂದ್ರದೊಳಗೆ ಪ್ರಭಾವ ಬೆಳೆಸಿಕೊಳ್ಳುವ ಮೂಲಕ, ತನ್ನ ಐತಿಹಾಸಿಕ ಅಂಚಿನ ಸ್ಥಿತಿಯಿಂದ ಅಲವೈಟ್ ಸಮುದಾಯ ಹೊರ ಬಂದಿತು.

ಯುದ್ಧಪೂರ್ವ ಸಿರಿಯಾದಲ್ಲಿ ಸರಿಸುಮಾರು ಶೇ. 12-15ರಷ್ಟು ಜನಸಂಖ್ಯೆ ಹೊಂದಿದ್ದ ಅಲವೈಟ್ ಸಮುದಾಯ, ಹಫೀಝ್ ಆಡಳಿತಕ್ಕೆ ಪ್ರಾಥಮಿಕ ನೆರವಿನ ಬುನಾದಿಯಾಯಿತು. ಈ ನಿಷ್ಠೆಯು ಅಲವೈಟ್ ಸಮುದಾಯದ ಐತಿಹಾಸಿಕ ಅಂಚಿನ ಸ್ಥಿತಿ ಹಾಗೂ ಅಸ್ಸಾದ್ ಗಳ ಆಡಳಿತದಲ್ಲಿ ಅವರಿಗೆ ದೊರೆತ ಅವಕಾಶಗಳು, ನಿರ್ದಿಷ್ಟವಾಗಿ ಸೇನಾಪಡೆ ಮತ್ತು ಭದ್ರತಾ ಸೇವೆಗಳಲ್ಲಿ ದೊರೆತ ಅವಕಾಶಗಳ ಬುನಾದಿಯನ್ನು ಹೊಂದಿದೆ.

ಅಲೈವಟ್ ಸಮುದಾಯ ಜನಾಂಗೀಯವಾಗಿ ಶಿಯಾ ಸಮುದಾಯವಲ್ಲವಾದರೂ, ಶಿಯಾ ಇಸ್ಲಾಂನ ಕೇಂದ್ರ ವ್ಯಕ್ತಿ ಅಲಿ ಇಬ್ನ್ ಅಬಿ ತಾಲಿಬ್ ರನ್ನು ಹೆಚ್ಚು ಹಿಂಬಾಲಿಸುತ್ತದೆ.

1947ರಲ್ಲಿ ಸ್ಥಾಪನೆಯಾದ ಬಾತ್ ಪಕ್ಷ ಅರಬ್ ರಾಷ್ಟ್ರೀಯತೆ, ಸಮಾಜವಾದ, ಜಾತ್ಯತೀತತೆ ಹಾಗೂ ಸಾಮ್ರಾಜ್ಯಶಾಹಿ ವಿರೋಧಿಗಳನ್ನು ಒಗ್ಗೂಡಿಸುವ ಬಯಕೆ ಹೊಂದಿತ್ತು. ಸಿರಿಯಾದಲ್ಲಿ ಗಮನಾರ್ಹ ಹಿಂಬಾಲಕರನ್ನು ಹೊಂದಿರುವ ಈಜಿಪ್ಟ್ ನ ಸುನ್ನಿ ಇಸ್ಲಾಂ ಸಂಘಟನೆ ಸ್ಥಾಪಿಸಿರುವ ಮುಸ್ಲಿಂ ಬ್ರದರ್ ಹುಡ್ ಗೆ ಬಾತ್ ಪಕ್ಷದ ಜಾತ್ಯತೀತತೆ ಮತ್ತು ಒಳಗೊಳ್ಳುವಿಕೆ ಸಿದ್ಧಾಂತಗಳು ಅಲವೈಟ್ ಸಮಯದಾಯಕ್ಕೆ ಹೆಚ್ಚು ಆಪ್ಯಾಯಮಾನ ಪರ್ಯಾಯವೆನಿಸಿದವು.

►ಸ್ವರೂಪದಲ್ಲೇ ರಾಜವಂಶ ಪಕ್ಷವಾಗಿದ್ದ ಬಾತ್ ಪಕ್ಷ

ನಾಯಕತ್ವಕ್ಕಾಗಿಯೇ ಬೆಳೆಸಿದ್ದ ತಮ್ಮ ಹಿರಿಯ ಪುತ್ರ ಬಸೆಲ್ ಗೆ ತಮ್ಮ ಅಧಿಕಾರ ಹಸ್ತಾಂತರಿಸುವ ಉದ್ದೇಶವನ್ನು ಹಫೀಝ್ ಅಲ್-ಅಸ್ಸಾದ್ ಹೊಂದಿದ್ದರು. ಆದರೆ, 1994ರಲ್ಲಿ ನಡೆದ ಕಾರು ಅಪಘಾತದಲ್ಲಿ ಬಸೆಲ್ ಅಕಾಲಿಕವಾಗಿ ಮೃತಪಟ್ಟ ನಂತರ, ಅಷ್ಟೇನೂ ಅನುಭವಿಯಲ್ಲದ ತಮ್ಮ ಎರಡನೆ ಪುತ್ರ ಬಶರ್ ರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿಸಲು ಹಫೀಝ್ ನಿರ್ಧರಿಸಿದರು. 2000ರಲ್ಲಿ ಹಫೀಝ್ ನಿಧನರಾದ ನಂತರ, ಬಶರ್ ಅಧ್ಯಕ್ಷ ಹುದ್ದೆಗೇರಿದರು. ಬಹು ನಿರೀಕ್ಷಿತವಾಗಿದ್ದ ಶೇ. 97ರಷ್ಟು ಬಹುಮತವನ್ನು ಪಡೆಯುವ ಮೂಲಕ ಬಶರ್ ತಮ್ಮ ಅಧ್ಯಕ್ಷೀಯತೆಗೆ ಅಂಗೀಕಾರದ ಮುದ್ರೆ ಪಡೆದರು.

ಬಶರ್ ಅವರ ಆಡಳಿತದ ಬಗ್ಗೆ ಆರಂಭದಲ್ಲಿ ನಿರೀಕ್ಷೆಗಳಿದ್ದವು. ಸುದೀರ್ಘ ಕಾಲದಿಂದ ನಿರಂಕುಶಾಧಿಕಾರದಿಂದ ಬಳಲಿರುವ ವ್ಯವಸ್ಥೆಗೆ ಸುಧಾರಣೆ ಹಾಗೂ ಮುಕ್ತತೆ ತರಲಿದ್ದಾರೆ ಎಂದು ಹಲವಾರು ಸಿರಿಯಾ ಪ್ರಜೆಗಳು ಹಾಗೂ ವಿದೇಶಗಳ ವೀಕ್ಷಕರು ಭಾವಿಸಿದ್ದರು. ಆದರೆ, ಆ ನಿರೀಕ್ಷೆಗಳು ಬಹುಬೇಗ ಛಿದ್ರವಾದವು. ಬಶರ್ ಕೇವಲ ತಮ್ಮ ತಂದೆಯ ವ್ಯವಸ್ಥೆಯನ್ನು ಮಾತ್ರ ಅಳವಡಿಸಿಕೊಳ್ಳಲಿಲ್ಲ; ಬದಲಿಗೆ, 1970ರಿಂದ ಪ್ರಮುಖ ಸರಕಾರಿ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಿದ್ದ, ವಯಸ್ಸಾದ ಕ್ರಾಂತಿಕಾರಿ ನಾಯಕರನ್ನು ಒಳಗೊಂಡಿದ್ದ ತಮ್ಮ ತಂದೆಯ ಆಪ್ತ ವಲಯವನ್ನೂ ಒಳಗೊಂಡರು.

►ಬಶರ್ ಅಧಿಕಾರದ ಬಲವರ್ಧನೆ

ಬಶರ್ ತಮ್ಮ ಅಧಿಕಾರದ ಆರಂಭಿಕ ದಿನಗಳಲ್ಲಿ ತಮ್ಮ ತಂದೆಯ ಮಿತ್ರರ ಬದಲು ತಮ್ಮದೇ ನಿಷ್ಠಾವಂತರ ಗುಂಪು ಕಟ್ಟಿಕೊಳ್ಳುವ ಪ್ರಯತ್ನ ಮಾಡಿದ್ದರು. ಈ ಪೈಕಿ ಬಹುತೇಕರು ಸಿರಿಯಾದ ಕುಲೀನರಾಗಿದ್ದರು. ಆದರೆ, ತಮ್ಮ ಪೂರ್ವಜರಂತೆ ಬಶರ್ ಆಂತರಿಕ ಬಳಗಕ್ಕೆ ಬೇರು ಮಟ್ಟದ ಸಂಪರ್ಕವಿರಲಿಲ್ಲ. ಅವರೆಲ್ಲ ಬಶರ್ ಆಡಳಿತವನ್ನು ಸಿರಿಯಾದ ಗ್ರಾಮೀಣ ಜನರಿಂದ ಪ್ರತ್ಯೇಕಿಸಿದ್ದರು.

ಬಶರ್ ಆಡಳಿತದಲ್ಲಿ ಸರಕಾರಿ ಸಂಸ್ಥೆಗಳು ದುರ್ಬಲಗೊಳ್ಳುತ್ತಿದ್ದಂತೆಯೆ, ಅವರ ಕುಟುಂಬದ ಸುತ್ತ ನೆರೆದಿದ್ದ ಕುಲೀನರು ಮುಂಚೂಣಿಗೆ ಬರುವ ಕಾಕತಾಳೀಯವೂ ನಡೆಯಿತು. ಬಶರ್ ಆಡಳಿತಾವಧಿಯಲ್ಲಿ ಭದ್ರತೆ ಹಾಗೂ ಸೇನಾಪಡೆ ಸಾಧನಗಳನ್ನು ನಿಯಂತ್ರಿಸುವಲ್ಲಿ ಬಶರ್ ಸಹೋದರ ಮಹೆರ್, ಅವರ ಸಹೊದರಿ ಬುಶ್ರಾ ಹಾಗೂ ಅವರ ಪತಿ ಆಸೀಫ್ ಶೌಕತ್ ಪ್ರಮುಖ ಪಾತ್ರ ವಹಿಸಿದ್ದರು. ಆರ್ಥಿಕ ಅಧಿಕಾರವು ಬಶರ್ ಆಪ್ತರ ಬಳಿ ಕೇಂದ್ರೀಕೃತಗೊಂಡಿತ್ತು. ಅತಿ ಮುಖ್ಯವಾಗಿ, ಸಿರಿಯಾದ ಶೇ. 60ರಷ್ಟು ಆರ್ಥಿಕತೆಯನ್ನು ನಿಯಂತ್ರಿಸುತ್ತಿದ್ದ ಬಶರ್ ಸೋದರ ಸಂಬಂಧಿ ರಾಮಿ ಮಖ್ಲೌಫ್ ಬಳಿ ಕೇಂದ್ರೀಕೃತಗೊಂಡಿತ್ತು.

ಹಫೀಝ್ ಅಲ್-ಅಸ್ಸಾದ್ ರ ಆಡಳಿತ ಬರ್ಬರ ದೌರ್ಜನ್ಯದಿಂದ ಕೂಡಿತ್ತು. 1982ರಲ್ಲಿ ಹಮಾ ನಗರದಲ್ಲಿ ಬೆಳೆಯುತ್ತಿದ್ದ ಮುಸ್ಲಿಂ ಬ್ರದರ್ ಹುಡ್ ಸಶಸ್ತ್ರ ದಂಗೆಯನ್ನು ಸಿರಿಯಾ ಸೇನಾ ಪಡೆ ಹತ್ತಿಕ್ಕಿದ ರೀತಿ ಕುಖ್ಯಾತವಾಗಿದೆ. ಈ ಸೇನಾ ಪಡೆ ದೌರ್ಜನ್ಯದಲ್ಲಿ 10,000ದಿಂದ 40,000 ಮಂದಿ ಮೃತಪಟ್ಟರು ಎಂದು ಅಂದಾಜಿಸಲಾಗಿದ್ದು, ಆಧುನಿಕ ಮಧ್ಯಪ್ರಾಚ್ಯ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ದೌರ್ಜನ್ಯ ಎಂದು ದಾಖಲಾಗಿದೆ.

ಇದೇ ಬಗೆಯಲ್ಲಿ ಮುಂದುವರಿದಿದ್ದ ಬಶರ್ ದಬ್ಬಾಳಿಕೆ ಆಡಳಿತವು, ಅರಬ್ ಪ್ರತಿಭಟನೆಯಂತಹ ಅಲೆಗಳು 2011ರಲ್ಲಿ ಸಿರಿಯಾವನ್ನೂ ಪ್ರವೇಶಿಸಿದಾಗ ಅಂತ್ಯಗೊಂಡಿತ್ತು. ಡೇರಾದಲ್ಲಿ ಶಾಂತಿಯುತವಾಗಿ ನಡೆದಿದ್ದ ಪ್ರತಿಭಟನಾ ಮೆರವಣಿಗೆಯ ಮೇಲೆ ಬಶರ್ ಆಡಳಿತವು ಭೀಕರವಾಗಿ ಮುಗಿ ಬಿದ್ದಿದ್ದರಿಂದ, ಅದು ಪೂರ್ಣಪ್ರಮಾಣದ ನಾಗರಿಕ ಯುದ್ಧ ಸ್ವರೂಪಕ್ಕೆ ತಿರುಗಿತ್ತು. ಈ ಸಂಘರ್ಷದಲ್ಲಿ ಸಾವಿರಾರು ಮಂದಿ ಮೃತಪಟ್ಟು, ಲಕ್ಷಾಂತರ ಮಂದಿ ನಿರ್ವಸತಿಗರಾಗಿದ್ದರು.

ಬಶರ್ ಆಡಳಿತವು ಕೆಟ್ಟ ಆರ್ಥಿಕ ನಿರ್ವಹಣೆ ಮತ್ತು ಬೆಳೆಯುತ್ತಿರುವ ಅಸಮಾನತೆಗೆ ಸಾಕ್ಷಿಯಾಯಿತು. 2000ರಿಂದ 2010ರ ನಡುವೆ ಜಿಡಿಪಿ ತಲಾದಾಯ ದ್ವಿಗುಣಗೊಂಡರೂ, ಅದರ ಲಾಭವು ಕೆಲವೇ ಕುಲೀನರ ಬಳಿ ಕ್ರೋಡೀಕರಣಗೊಂಡಿತು. ವ್ಯಾಪಕ ಪ್ರಮಾಣದ ಬಡತನ, ನಿರುದ್ಯೋಗ ಹಾಗೂ ಭ್ರಷ್ಟಾಚಾರ ಸಾರ್ವಜನಿಕರ ಅಸಮಾಧಾನವನ್ನು ತೀವ್ರಗೊಳಿಸಿದವು. 2000ರ ದಶಕದಲ್ಲಿ ತಲೆದೋರಿದ ತೀವ್ರ ಕ್ಷಾಮ ಹಾಗೂ ಕಳಪೆ ಸಂಪನ್ಮೂಲ ನಿರ್ವಹಣೆಯಿಂದಾಗಿ ಸಾವಿರಾರು ಸಿರಿಯಾ ಗ್ರಾಮೀಣ ವಾಸಿಗಳು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಯಿತು.

ಅಸ್ಸಾದ್ ಆಡಳಿತದ ಬದುಕುಳಿಯುವ ಕಾರ್ಯತಂತ್ರವು ನೈಜ ಅಧಿಕಾರವು ಅಧಿಕೃತ ಸಂಸ್ಥೆಗಳ ಹೊರಗಿನ ಶಕ್ತಿಗಳ ಬಳಿ ಉಳಿಯುವಂಥ ಛಾಯಾ ಸರಕಾರದ ಮಾದರಿಯಲ್ಲಿ ಬೇರು ಬಿಟ್ಟಿತ್ತು. ಈ ವ್ಯವಸ್ಥೆಯನ್ನು ಭದ್ರತಾ ಸಂಸ್ಥೆಗಳ ಅತಿಕ್ರಮಣ, ಪ್ರೋತ್ಸಾಹಕ ಜಾಲಗಳು ಹಾಗೂ ಸಾಂಸ್ಕೃತಿಕ ಮತ್ತು ಪರಸ್ಪರ ನಿಗಾವಣೆಯ ಮೂಲಕ ಕ್ಷಿಪ್ರ ಕ್ರಾಂತಿ ತಡೆಯಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿತ್ತು. ಈ ವ್ಯವಸ್ಥೆಯ ನಿಯಂತ್ರಣ ಪರಿಣಾಮಕಾರಿಯಾಗಿದ್ದರೂ, ಇದರಿಂದ ಸಿರಿಯಾ ಸರಕಾರದ ಆಡಳಿತ ಟೊಳ್ಳು ಮತ್ತು ಉತ್ತರದಾಯಿತ್ವ ಇಲ್ಲದಂತಾಯಿತು.

ಸಿರಿಯಾದಲ್ಲಿ ಹೊರನೋಟಕ್ಕೆ ಚುನಾವಣೆಗಳು ಹಾಗೂ ಸಾಂವಿಧಾನಿಕ ಸುಧಾರಣೆಗಳು ನಡೆಯುತ್ತಿರುವಂತೆ ಕಂಡು ಬಂದರೂ, ಸಿರಿಯಾ ಮಾತ್ರ ಅನಧಿಕೃತ ಸರ್ವಾಧಿಕಾರಿ ದೇಶವಾಗಿಯೇ ಉಳಿದು ಹೋಯಿತು.

►2011 ಮತ್ತು ನಂತರ

13 ವರ್ಷಗಳ ನಂತರ, ಸಿರಿಯಾದಲ್ಲಿ ಸುಧಾರಣೆಗಳಿಗಾಗಿ ಆಶಾದಾಯಕ ಬೇಡಿಕೆಗಳು ಪ್ರಾರಂಭಗೊಂಡರೂ, ನಾಗರಿಕ ಯುದ್ಧ ಮಾತ್ರ ಪರಿಹಾರ ಕಾಣದ ಬಿಕ್ಕಟ್ಟಾಗಿಯೇ ಉಳಿಯಿತು. ಅರಬ್ ಸ್ಪ್ರಿಂಗ್ ಹೋರಾಟದಿಂದ ಪ್ರೇರಣೆಗೊಂಡ ಸಿರಿಯಾದಲ್ಲಿನ ಬಂಡಾಯಕ್ಕೆ 2011ರಲ್ಲಿ ಡಾರಾದಲ್ಲಿ ನಡೆದ ಪ್ರತಿಭಟನೆಯ ಮೇಲೆ ಬಶರ್ ಆಡಳಿತ ಹಿಂಸಾತ್ಮಕ ದಬ್ಬಾಳಿಕೆ ನಡೆಸಿದ್ದರಿಂದ ತೀವ್ರವಾಗಿ ವ್ಯಾಪಿಸಿತು.

ಮೊದಲಿಗೆ ಸಾಧಾರಣ ಸುಧಾರಣೆಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆ, ನಂತರ ಪೂರ್ಣ ಪ್ರಮಾಣದ ನಾಗರಿಕ ಯುದ್ಧಕ್ಕೆ ತಿರುಗಿ, ಸಾವಿರಾರು ಮಂದಿಯ ಸಾವು ಹಾಗೂ ಲಕ್ಷಾಂತರ ಜನ ನಿರ್ವಸತಿಗರಾಗಲು ಕಾರಣವಾಯಿತು. 2024ರಲ್ಲಿನ ಅಲ್ಪ ವಿರಾಮದ ನಂತರ, ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದರಿಂದ, ಸಿರಿಯಾದಲ್ಲಿನ ಬಿಕ್ಕಟ್ಟು ಮತ್ತೆ ಜಾಗತಿಕ ಗಮನ ಸೆಳೆಯುವಂತಾಯಿತು.

ಹಯಾತ್ ತಹ್ರಿರ್ ಅಲ್-ಶಾಮ್ ಎಂಬ ಹೆಸರಿನ ಗುಂಪಿನ ನೇತೃತ್ವದಲ್ಲಿ ಬಂಡುಕೋರರ ಪಡೆಗಳು ಪ್ರಪ್ರಥಮ ಬಾರಿಗೆ ಬಶರ್ ಆಡಳಿತಕ್ಕೆ ನೇರ ಸವಾಲು ಒಡ್ಡುವಂತೆ ಈ ಹಿಂದೆಂದೂ ಕಾಣದಂತಹ ದಾಳಿಯನ್ನು ಪ್ರಾರಂಭಿಸಿದವು. ಈ ಹಿಂದೆ ಅಲ್ ಕೈದಾದೊಂದಿಗೆ ಸಂಪರ್ಕ ಹೊಂದಿದ್ದ ಹಯಾತ್ ತಹ್ರಿರ್ ಅಲ್-ಶಾಮ್ ಇಸ್ಲಾಮಿಕ್ ಬಣ, ಅಬು ಮುಹಮ್ಮದ್ ಅಲ್-ಜೊಲಾನಿ ನಾಯಕತ್ವದಲ್ಲಿ ತನ್ನ ಬಂಡುಕೋರ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಪ್ರಯತ್ನಿಸಿತಾದರೂ, ವಿಶ್ವ ಸಂಸ್ಥೆ ಹಾಗೂ ಅಮೆರಿಕದಿಂದ ಈಗಲೂ ಬಂಡುಕೋರ ಸಂಘಟನೆ ಎಂದೇ ಗುರುತಿಸಲ್ಪಟ್ಟಿದೆ.

ಬಂಡುಕೋರರರು ತ್ವರಿತವಾಗಿ ಮುನ್ನುಗ್ಗಿ, ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುವ ಮೂಲಕ, ಡಮಾಸ್ಕಸ್ ನಿಯಂತ್ರಣವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡವು. ಹೀಗಾಗಿ, ಅಲ್-ಅಸ್ಸಾದ್ ಗಳು ದೇಶ ಬಿಟ್ಟು ಪರಾರಿಯಾಗುವುದು ಅನಿವಾರ್ಯವಾಯಿತು.

ಸೌಜನ್ಯ: ndtv.com

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News