ಸುಳ್ಳು ಪ್ರಮಾಣಪತ್ರ ಪ್ರಕರಣ: ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಗೆ ವಜಾ ಭೀತಿ

Update: 2024-07-13 02:55 GMT

ಪೂಜಾ ಖೇಡ್ಕರ್ PC: x.com/sathyashrii

ಹೊಸದಿಲ್ಲಿ: ಅಂಗವೈಕಲ್ಯ ಮತ್ತು ಓಬಿಸಿ ಪ್ರಮಾಣಪತ್ರದ ಅಧಿಕೃತತೆ ವಿಚಾರದಲ್ಲಿ ವಿವಾದದ ಕೇಂದ್ರಬಿಂದುವಾಗಿರುವ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಇದೀಗ ವಜಾ ಭೀತಿ ಎದುರಿಸುತ್ತಿದ್ದಾರೆ. ಪ್ರಕರಣದ ವಾಸ್ತವಾಂಶ ಪತ್ತೆಗೆ ಕೇಂದ್ರ ಸರ್ಕಾರ ನೇಮಕ ಮಾಡಿರುವ ಏಕ ವ್ಯಕ್ತಿ ತನಿಖಾ ತಂಡ, ಪ್ರಕರಣದಲ್ಲಿ ಖೇಡ್ಕರ್ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ ಅಥವಾ ಅಕ್ರಮ ಎಸಗಿದ್ದಾರೆ ಎಂಬ ನಿರ್ಧಾರಕ್ಕೆ ಬಂದರೆ, ಉದ್ಯೋಗ ಕಳೆದುಕೊಳ್ಳುವ ಜತೆಗೆ ಫೋರ್ಜರಿ ಪ್ರಕರಣ ಕೂಡಾ ಇವರ ವಿರುದ್ಧ ದಾಖಲಾಗಲಿದೆ.

ಖೇಡ್ಕರ್ ಅವರು ಹೇಗೆ ಅಂಗವೈಕಲ್ಯ ಮತ್ತು ಓಬಿಸಿ ಸ್ಥಾನಮಾನವನ್ನು ಪಡೆಯುವ ದಾಖಲೆಯನ್ನು ಪಡೆದರು ಎಂಬ ಬಗ್ಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ದ್ವಿವೇದಿ ಮುಂದಿನ ಎರಡು ವಾರಗಳಲ್ಲಿ ತನಿಖೆ ನಡೆಸಲಿದ್ದು, ಪ್ರಮಾಣಪತ್ರ ನೀಡಿದ ಅಧಿಕಾರಿಗಳು ಅಗತ್ಯ ಪರಿಶೀಲನೆ ನಡೆಸಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಅಂಗವೈಕಲ್ಯ ಹೊಂದಿದ ವ್ಯಕ್ತಿಗಳ ಕೋಟಾದಡಿ ಐಎಎಸ್ ಗೆ ಅರ್ಹತೆ ಪಡೆದಿದ್ದರೂ, ಅಂಗವೈಕಲ್ಯವನ್ನು ದೃಢಪಡಿಸುವ ಸಂಬಂಧ ದೆಹಲಿ ಎಐಐಎಂಎಸ್ ನಲ್ಲಿ ನಡೆಯಬೇಕಿದ್ದ ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಖೇಡ್ಕರ್ ಪದೇ ಪದೇ ಗೈರುಹಾಜರಾಗಿದ್ದರು ಎನ್ನಲಾಗಿದೆ.

"ಈ ತನಿಖಾ ತಂಡ ತನ್ನ ವರದಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಕಳುಹಿಸಲಿದ್ದು, ಖೇಡ್ಕರ್ ಗೆ ಮಹಾರಾಷ್ಟ್ರ ಕೇಡರ್ ಹಂಚಿಕೆಯಾಗಿರುವುದರಿಂದ ಆ ಬಳಿಕ ವರದಿಯನ್ನು ಶಿಫಾರಸ್ಸಿನ ಸಹಿತ ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಇತರ ಹಿಂದುಳಿದ ವರ್ಗ ಹಾಗೂ ಅಂಗವೈಕಲ್ಯ ಪ್ರಮಾಣಪತ್ರಗಳು ನಕಲಿ ಎಂದು ಕಂಡುಬಂದಲ್ಲಿ, ರಾಜ್ಯ ಸರ್ಕಾರ ಅವರನ್ನು ಸೇವೆಯಿಂದ ವಜಾಗೊಳಿಸಬಹುದಾಗಿದೆ. ಜತೆಗೆ ಅವರ ವಿರುದ್ಧ ಫೋರ್ಜರಿ ಪ್ರಕರಣ ಮತ್ತು ಸುಳ್ಳು ದಾಖಲೆ ಸೃಷ್ಟಿಸಿದ ಪ್ರಕರಣ ದಾಖಲಾಗಲಿದೆ" ಎಂದು ಮೂಲಗಳು ಸ್ಪಷ್ಟಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News