ರಾಜಸ್ಥಾನ ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡುವೆ ಕುತೂಹಲ ಮೂಡಿಸಿದ 5 ಬಿಜೆಪಿ ಶಾಸಕರ ರೆಸಾರ್ಟ್‌ ಭೇಟಿ

Update: 2023-12-07 12:21 GMT

ಸಾಂದರ್ಭಿಕ ಚಿತ್ರ (PTI)

ಜೈಪುರ್: ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುರಿತು ರಹಸ್ಯ ನಿಗೂಢವಾಗಿರುವಂತೆಯೇ ನಗರದ ಹೊರವಲಯದ ರೆಸಾರ್ಟ್‌ ಒಂದಕ್ಕೆ ಐದು ಮಂದಿ ಬಿಜೆಪಿ ಶಾಸಕರು ಭೇಟಿ ನೀಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಕಿಶನ್‌ಗಂಜ್‌ ಕ್ಷೇತ್ರದ ನೂತನ ಶಾಸಕ ಲಲಿತ್‌ ಮೀನಾ ಅವರನ್ನು ಇತರ ನಾಲ್ಕು ಮಂದಿ ಶಾಸಕರು ರೆಸಾರ್ಟ್‌ನಲ್ಲಿ ಬಲವಂತದಿಂದ ಇರಿಸಿಕೊಂಡಿದ್ದರೆಂದು ಲಲಿತ್‌ ಅವರ ತಂದೆ ಆರೋಪಿಸಿದ್ದಾರೆ. ಈ ಕುರಿತು ಅವರು ಬಿಜೆಪಿ ಮುಖಂಡರಿಗೆ ಮಾಹಿತಿ ನೀಡಿದ ನಂತರ ಲಲಿತ್‌ ಅವರನ್ನು ಅಲ್ಲಿಗೆ ಬುಧವಾರ ಬೆಳಿಗ್ಗೆ ಕರೆತರಲಾಯಿತು. ಇತರ ನಾಲ್ಕು ಶಾಸಕರು ಇನ್ನೂ ರೆಸಾರ್ಟ್‌ನಲ್ಲಿಯೇ ಉಳಿದುಕೊಂಡಿದ್ದಾರೆಯೇ ಎಂಬ ಕುರಿತು ಮಾಹಿತಿಯಿಲ್ಲ ಎಂದು PTI ವರದಿ ಮಾಡಿದೆ.

ಆದರೆ ಈ ಘಟನೆ ಬಗ್ಗೆ ಹೆಚ್ಚು ಮಾಹಿತಿ ನೀಡಲು ಲಲಿತ್‌ ಮೀನಾ ನಿರಾಕರಿಸಿದ್ದಾರೆ. ಅದರೆ ಇದು ʼಬಡಾಬಂದಿʼ ಅತವಾ ಶಕ್ತಿ ಪ್ರದರ್ಶನಕ್ಕಾಗಿ ಶಾಸಕರನ್ನು ಒಟ್ಟುಗೂಡಿಸುವ ಯತ್ನವೆಂದೇ ಹೇಳಲಾಗುತ್ತಿದೆ.

ಶಾಸಕನ ತಂದೆಯ ಪ್ರಕಾರ ಅವರನ್ನು ಇನ್ನೊಬ್ಬ ಶಾಸಕ ಕನ್ವರ್‌ ಲಾಲ್‌ ಮೀನಾ ಸಭೆಯೊಂದಿದೆ ಎಂದು ಹೇಳಿ ರೆಸಾರ್ಟ್‌ಗೆ ಕರೆಸಿದ್ದರು ಆದರೆ ನಂತರ ಅಲ್ಲಿಂದ ವಾಪಸಾಗಲು ಬಿಟ್ಟಿಲ್ಲ. ನಂತರ ಅವರು ತಮ್ಮ ತಂದೆಗೆ ಮಾಹಿತಿ ನೀಡಿದ್ದರು.

ಯಾರ ನಿರ್ದೇಶನದನ್ವಯ ಶಾಸಕರನ್ನು ರೆಸಾರ್ಟ್‌ ನಲ್ಲಿರಿಸಲಾಗಿದೆ ಎಂದು ತಿಳಿದು ಬಂದಿಲ್ಲ. ಪಕ್ಷದ ಮೂಲಗಳ ಪ್ರಕಾರ ಕೋಟಾ ಪ್ರದೇಶದ ಈ ಐದು ಮಂದಿ ಶಾಸಕರು ಮಂಗಳವಾರ ರಾತ್ರಿ ರೆಸಾರ್ಟ್‌ಗೆ ಬಂದಿದ್ದರು ಹಾಗೂ ಕೋಟ್‌ಪುತ್ಲಿಯ ಇನ್ನೊಂದು ರೆಸಾರ್ಟ್‌ಗೆ ಸ್ಥಳಾಂತರಗೊಳ್ಳುವ ಉದ್ದೇಶ ಹೊಂದಿದ್ದರು.

ಯಾವುದೇ ʼಬಡಾಬಂದಿʼ ಇಲ್ಲ ಎಲ್ಲಾ ಶಾಸಕರೂ ಅವರವರ ಕ್ಷೇತ್ರಗಳಲ್ಲಿದ್ದಾರೆಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸಿ ಪಿ ಜೋಷಿ ಹೇಳಿದ್ದಾರೆ. ಶಾಸಕಾಂಗ ಪಕ್ಷ ಸಭೆಯ ನಂತರ ಸಿಎಂ ಆಯ್ಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ತರುವಾಯ ಮಾಜಿ ಸಿಎಂ ವಸುಂಧರಾ ರಾಜೆ ನಿವಾಸದ ಹೊರಗೆ ಎರಡು ದೊಡ್ಡ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿಯನ್ನು ವಸುಂಧರಾರಾಜೆ ಅಭಿನಂದಿಸುವ ಪೋಸ್ಟರ್‌ಗಳು ಇವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News