25 ದಿನಗಳಲ್ಲಿ ಒಂದೇ ಊರಿನ ಐದು ಮಂದಿ ಹೃದಯಾಘಾತಕ್ಕೆ ಬಲಿ
ಅಲೀಗಢ: ಉತ್ತರ ಪ್ರದೇಶದ ಅಲೀಗಢ ನಗರದ ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಮಕ್ಕಳ ಸಹಿತ ಐದು ಮಂದಿ ಕಳೆದ ಇಪ್ಪತ್ತೈದು ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ರಾಜ್ಯ ಪೊಲೀಸ್ ಕಾನ್ಸ್ಟೇಬಲ್ ಉದ್ಯೋಗಕ್ಕಾಗಿ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಸಜ್ಜಾಗುತ್ತಿರುವ ಅರಣಾ ಗ್ರಾಮದ ಮಮತಾ ಚೌಧರಿ (20) ಪ್ರತಿ ದಿನ ಬೆಳಿಗ್ಗೆ ಓಟ ಅಭ್ಯಾಸ ಮಾಡುತ್ತಿದ್ದರು. ನವೆಂಬರ್ 23ರಂದು ಬೆಳಿಗ್ಗೆ ಅವರು ಓಡುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದರು. ಕೂಡಲೇ ಚಿಕಿತ್ಸೆಗಾಗಿ ದಾಖಲಿಸಿದರೂ ಹೃದಯಾಘಾತದಿಂದ ಅವರು ಮೃತಟ್ಟಿರುವುದನ್ನು ಜೆಎನ್ ಮೆಡಿಕಲ್ ಕಾಲೇಜಿನ ವೈದ್ಯರು ದೃಢಪಡಿಸಿದರು.
"ಮೈದಾನದಲ್ಲಿ ನಾಲ್ಕು- ಐದು ಸುತ್ತು ಓಡಿದ್ದಳು. ಆ ಬಳಿಕ ಮೈದಾನದಲ್ಲೇ ಕುಸಿದು ಬಿದ್ದಳು" ಎಂದು ಸಹೋದರ ವಿವರಿಸಿದ್ದಾರೆ.
ಅದೇ ರೀತಿ ಸುರೌಲಿ ಗ್ರಾಮದ ಮೋಹಿತ್ ಚೌಧರಿ ಆರನೇ ತರಗತಿ ವಿದ್ಯಾರ್ಥಿ. ವಾರ್ಷಿಕ ಕ್ರೀಡಾಕೂಟಕ್ಕೆ ಈ 14ರ ಬಾಲಕ ಸಜ್ಜಾಗುತ್ತಿದ್ದ. ಶುಕ್ರವಾರ ಓಟದ ಅಭ್ಯಾಸದ ವೇಳೆ ಕುಸಿದು ಬಿದ್ದು, ಹೃದಯಾಘಾತದಿಂದ ಮೃತಪಟ್ಟ. ಭಾನುವಾರ ಲೋಧಿನಗರದ ಎಂಟು ವರ್ಷದ ದೀಕ್ಷಾ ಸ್ನೇಹಿತರ ಜತೆ ಆಟವಾಡುತ್ತಿದ್ದಗ ಹೃದಯಾಘಾತದಿಂದ ಮೃತಪಟ್ಟಳು. ಇದಕ್ಕೂ ಮುನ್ನ ನವೆಂಬರ್ 5ರಂದು ಡಾ.ಲವನೀಶ್ ಅಗರ್ವಾಲ್ ಬೆಳಿಗ್ಗೆ ವಾಯುವಿಹಾರ ಮುಗಿಸಿ ಮನೆಗೆ ಬಂದು ಕೆಲಸಕ್ಕೆ ಸಜ್ಜಾಗುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟರು.
ಇಪ್ಪತ್ತೊಂಬತ್ತು ವರ್ಷದ ಸೈಯ್ಯದ್ ಬರ್ಕತ್ ಹೈದರ್ ನವೆಂಬರ್ 20ರಂದು ನಿದ್ದೆಯಲ್ಲಿ ಹೃದಯಾಘಾತಕ್ಕೀಡಾಗಿದ್ದರು. ಕೋವಿಡ್-19 ಸಾಂಕ್ರಾಮಿಕದ ಬಳಿಕ ಹೃದಯಾಘಾತ ಹೆಚ್ಚುತ್ತಿದೆ ಎನ್ನುವುದು ಹೃದ್ರೋಗ ತಜ್ಞರೊಬ್ಬರ ಅಭಿಮತ. ಅಲೀಗಢ ಮುಸ್ಲಿಂ ವಿವಿಯ ಪ್ರೊಫೆಸರ್ ಎಂ.ರಬ್ಬಾನಿ ಅವರ ಪ್ರಕಾರ ಕಳೆದ 20 ವರ್ಷಗಳಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಶೇಕಡ 20ರಷ್ಟು ಹೆಚ್ಚಿದೆ.