ಪ್ರಧಾನಿ ಮೋದಿಯ ಚಿತ್ರವಿರುವ ಆಹಾರ ಧಾನ್ಯ ಚೀಲಗಳ ಖರೀದಿಗೆ 5 ರಾಜ್ಯಗಳಲ್ಲಿ 15 ಕೋಟಿ ರೂ. ವ್ಯಯಿಸಲಿರುವ ಕೇಂದ್ರ ಸರಕಾರ

Update: 2024-03-02 08:15 GMT

ಸಾಂದರ್ಭಿಕ ಚಿತ್ರ (Photo credit: thehindu.com)

ಹೊಸದಿಲ್ಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರವು ಪ್ರಧಾನ್‌ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯಡಿಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಚೀಲಗಳನ್ನು ಖರೀದಿಸಲು ಐದು ರಾಜ್ಯಗಳಲ್ಲಿ ರೂ 15 ಕೋಟಿ ವ್ಯಯಿಸುತ್ತಿದೆ ಎಂದು thehindu.com ವರದಿ ಮಾಡಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಅಜಯ್‌ ಬೋಸ್‌ ಅವರು ಸಲ್ಲಿಸಿದ್ದ RTI ಅರ್ಜಿಗೆ ದೊರೆತ ಉತ್ತರದಲ್ಲಿ ಈ ವಿವರ ದೊರಕಿದೆ. ಈ ಮಾಹಿತಿ ಪ್ರಕಾರ ರಾಜಸ್ಥಾನ, ಸಿಕ್ಕಿಂ, ಮಿಜೋರಾಂ, ತ್ರಿಪುರಾ ಮತ್ತು ಮೇಘಾಲಯ ರಾಜ್ಯಗಳ ಫುಡ್‌ ಕಾರ್ಪೊರೇಷನ್‌ ಆಪ್‌ ಇಂಡಿಯಾದ ಪ್ರಾದೇಶಿಕ ಕಚೇರಿಗಳು ಆಹಾರ ಧಾನ್ಯವನ್ನು ಮೇಲಿನ ಯೋಜನೆಯಡಿ ವಿತರಿಸಲು “ಪ್ರಧಾನಿ ಮೋದಿ ಅವರ ಇಂಡಿಕೇಟಿವ್‌ ಲೋಗೋ ಇರುವ ನೇಯ್ದ ಲ್ಯಾಮಿನೇಟೆಡ್‌ ಚೀಲಗಳನ್ನು” ಖರೀದಿಸಲು ಟೆಂಡರ್‌ಗಳನ್ನು ಅಂತಿಮಗೊಳಿಸಿವೆ.

ಪ್ರಧಾನ್‌ ಮಂತ್ರಿ ಗರೀಬ್‌ ಕಲ್ಯಾನ್‌ ಯೋಜನೆಯಡಿಯಲ್ಲಿ 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ಒದಗಿಸಲಾಗುತ್ತದೆ.

ಆರ್‌ಟಿಐ ಉತ್ತರದ ಪ್ರಕಾರ ರಾಜಸ್ಥಾನದ ಫುಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಕಚೇರಿಯು 1.07 ಕೋಟಿ ಚೀಲಗಳಿಗೆ ಆರ್ಡರ್‌ ನೀಡಿದೆ. 10 ಕೆಜಿ ಧಾನ್ಯ ತುಂಬಿಸಬಹುದಾದ ಈ ಪ್ರತಿ ಚೀಲದ ಬೆಲೆ ರೂ 12.375 ಆಗಿದ್ದು ಒಟ್ಟು ವೆಚ್ಚ ರೂ 13.29 ಕೋಟಿ ಆಗಿದೆ. ಕಾರ್ಪೊರೇಷನ್‌ನ ಮೇಘಾಲಯ ಕಚೇರಿ ತಲಾ ಚೀಲಕ್ಕೆ ರೂ 12.5 ವೆಚ್ಚದಲ್ಲಿ 4.22 ಲಕ್ಷ ಚೀಲಗಳಿಗೆ ಟೆಂಡರ್‌ ಅನ್ನು ಪ್ಲಾಸ್ಕಾಂ ಇಂಡಸ್ಟ್ರೀಸ್‌ಗೆ ನೀಡಿತ್ತು. ಒಟ್ಟು ವೆಚ್ಚ ರೂ 52.75 ಲಕ್ಷ ಆಗಲಿದೆ.

ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಿಗೆ ಎಸ್‌ಎಸ್‌ಎಸ್‌ ಸರ್ವಿಸಸ್‌ ಎಂಬ ಕಂಪೆನಿ ತಲಾ ಬ್ಯಾಗ್‌ಗೆ ರೂ 14.3 ವೆಚ್ಚದಂತೆ ಟೆಂಡರ್‌ ಪಡೆದಿದೆ. ಮಿಜೋರಾಂನಲ್ಲಿ 1.75 ಲಕ್ಷ ಚೀಲಗಳಿಗೆ ರೂ 25 ಲಕ್ಷ ಹಾಗೂ ತ್ರಿಪುರಾದಲ್ಲಿ 5.98 ಲಕ್ಷ ಚೀಲಗಳಿಗೆ ರೂ 85.51 ಲಕ್ಷ ವೆಚ್ಚ ಆಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News