ರಾಜ್ಯಸಭೆಯಲ್ಲಿ ಮಾಜಿ ಸಿಜೆಐ ರಂಜನ್ ಗೊಗೊಯಿ ಭಾಷಣದ ವೇಳೆ ಸಭಾತ್ಯಾಗ ಮಾಡಿದ ನಾಲ್ವರು ಮಹಿಳಾ ಸಂಸದರು

Update: 2023-08-08 15:52 GMT

 ಜಯಾ ಬಚ್ಚನ್, ಪ್ರಿಯಾಂಕಾ ಚತುರ್ವೇದಿ , ವಂದನಾ ಚವಾಣ್ ಹಾಗೂ  ಸುಶ್ಮಿತಾ ದೇವ್ | Photo: PTI 

ಹೊಸದಿಲ್ಲಿ: ರಾಜ್ಯಸಭೆಯನ್ನುದ್ದೇಶಿಸಿ ನಾಮನಿರ್ದೇಶನಗೊಂಡಿರುವ ಸದಸ್ಯ, ಮಾಜಿ ಸಿಜೆಐ ರಂಜನ್ ಗೊಗೊಯಿ ಅವರು ತಮ್ಮ ಚೊಚ್ಚಲ ಭಾಷಣ ಮಾಡಲು ಪ್ರಾರಂಭಿಸಿದಾಗ, ಅದನ್ನು ಪ್ರತಿಭಟಿಸಿ ನಾಲ್ವರು ಮಹಿಳಾ ಸಂಸದರು ಮಂಗಳವಾರ ರಾಜ್ಯಸಭೆ ಕಲಾಪದಿಂದ ಸಭಾತ್ಯಾಗ ನಡೆಸಿದರು. ರಂಜನ್ ಗೊಗೊಯಿ ಅವರು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದಾಗ ಅವರ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಗೊಗೋಯಿ ಅವರ ಉಪಸ್ಥಿತಿ ಹಾಗೂ ಭಾಷಣಕ್ಕೆ ಆಕ್ಷೇಪಣೆ ವ್ಯಕ್ತಪಡಿಸುವ ಭಾಗವಾಗಿ ಈ ಸಭಾತ್ಯಾಗ ನಡೆಯಿತು. ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದ ಮಹಿಳಾ ಸಂಸದರ ಪೈಕಿ ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಎನ್ಸಿಪಿಯ ವಂದನಾ ಚವಾಣ್ ಹಾಗೂ ಟಿಎಂಸಿಯ ಸುಶ್ಮಿತಾ ದೇವ್ ಸೇರಿದ್ದರು ಎಂದು Times Of India ಸುದ್ದಿ ಸಂಸ್ಥೆ ವರದಿ ಮಾಡಿದೆ.

 

2019ರಲ್ಲಿ ಮಾಜಿ ಸಹೋದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗೊಗೊಯಿ ಗುರಿಯಾಗಿದ್ದುದರಿಂದ ರಾಷ್ಟ್ರವ್ಯಾಪಿ #MeToo ಆಂದೋಲನದ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಈ ಆರೋಪಗಳ ಹೊರತಾಗಿಯೂ ತಾನು ಯಾವುದೇ ತಪ್ಪು ಮಾಡಿಲ್ಲವೆಂದು ಗೊಗೊಯಿ ನಿರಾಕರಿಸಿದ್ದರು. ಅದರ ಬದಲಿಗೆ ಬಾಕಿಯಿರುವ ಸೂಕ್ಷ್ಮ ಕಾನೂನು ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಕಚೇರಿಯನ್ನು ಅಸ್ಥಿರಗೊಳಿಸುವ ಪಿತೂರಿ ನಡೆಯುತ್ತಿರಬಹುದು ಎಂದು ಗೊಗೊಯಿ ಆರೋಪಿಸಿದ್ದರು.

ಗೊಗೊಯಿ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು ಮತ್ತು ಆ ಸಮಿತಿಯು ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿತ್ತು. ಯಾವುದೇ ನಿರ್ಣಯ ಕೈಗೊಳ್ಳಲು ನಿರ್ಣಾಯಕ ಸಾಕ್ಷ್ಯಗಳು ದೊರೆತಿಲ್ಲ ಎಂದು ಸಮಿತಿಯು ಹೇಳಿತ್ತು.

ಹೀಗಿದ್ದೂ, ಗೊಗೊಯಿ ಪ್ರಕರಣಗಳ ವಿಚಾರಣೆ ನಡೆಸುವುದರ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು, ವಿಶೇಷವಾಗಿ ದೂರುದಾರರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದ ತುರ್ತು ಪೀಠ ಹಾಗೂ ಪರ್ಯಾಯ ಪೀಠವನ್ನು ರಚಿಸುವಲ್ಲಿನ ಅವರ ಪಾತ್ರದ ಕುರಿತು ಪ್ರಶ್ನೆಗಳು ಕೇಳಿ ಬಂದಿದ್ದವು. ಈ ಘಟನೆಯು ನ್ಯಾಯಾಂಗದಲ್ಲಿರುವ ಲೈಂಗಿಕ ಕಿರುಕುಳ ಆರೋಪಗಳನ್ನು ತನಿಖೆ ನಡೆಸಲು ಇರುವ ಸಂಕೀರ್ಣ ಹಾಗೂ ಬಹುಮುಖ ಸವಾಲುಗಳನ್ನು ಎತ್ತಿ ತೋರಿಸಿತ್ತು. ಇದಲ್ಲದೆ, ಈ ಪ್ರಕರಣವು ನ್ಯಾಯಾಂಗ ಸ್ವಾತಂತ್ಯದ ಉತ್ತರದಾಯಿತ್ವ ಹಾಗೂ ರಕ್ಷಣೆಯ ಕುರಿತು ಬಹು ಮುಖ್ಯ ಹಾಗೂ ಗಂಭೀರ ಪ್ರಶ್ನೆಗಳನ್ನೆತ್ತಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News