ಗುಜರಾತ್: 7 ವರ್ಷಗಳಲ್ಲಿ ದಲಿತರ ವಿರುದ್ಧ 9,178 ಅಪರಾಧ ಪ್ರಕರಣಗಳು

Update: 2023-07-15 18:01 GMT

ಸಾಂದರ್ಭಿಕ ಚಿತ್ರ \ Photo: PTI 

ಅಹ್ಮದಾಬಾದ್: ಗುಜರಾತ್ ನಲ್ಲಿ ನಡೆದ ಇಬ್ಬರು ದಲಿತ ಸಹೋದರರ ಹತ್ಯೆ ಸುದ್ದಿಯಲ್ಲಿದೆ. ಹತ್ಯೆಯ ವಿರುದ್ಧ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿರುವಂತೆಯೇ, ಗುಜರಾತ್ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ. ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳನ್ನು ಅಮಾನತುಗೊಳಿಸಿದ್ದಾರೆ.

ಆದರೆ, ಗುಜರಾತ್ನಲ್ಲಿ ಇದೇನೂ ಹೊಸತಲ್ಲ. 2015ರ ನಂತರದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ದಲಿತರ ವಿರುದ್ಧ 9,178 ಅಪರಾಧ ಪ್ರಕರಣಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿಯೊಂದನ್ನು ಉಲ್ಲೇಖಿಸಿ ಕೇಂದ್ರ ಸರಕಾರವು ಸಂಸತ್ಗೆ ತಿಳಿಸಿದೆ.

ಗುಜರಾತ್ನ ಸುರೇಂದ್ರನಗರ ಜಿಲ್ಲೆಯ ಸಮದಿಯಲ ಗ್ರಾಮದಲ್ಲಿ, ಈ ದಲಿತ ಸಹೋದರರನ್ನು ಕತಿದರ್ಬಾರ್ ಸಮುದಾಯದ ಸದಸ್ಯರು ಬುಧವಾರ ಕೊಂದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯ ಹೊರಗೆ ಹತ್ಯೆಯಾದ ವ್ಯಕ್ತಿಗಳ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು. ಕೃಷಿ ಹೊಲದಲ್ಲಿ ಮತ್ತು ನ್ಯಾಯಾಲಯದ ವಿಚಾರಣೆಗಳ ವೇಳೆ ರಕ್ಷಣೆ ಒದಗಿಸಲು ಪೊಲೀಸರು ಒಪ್ಪಿಕೊಂಡ ಬಳಿಕವಷ್ಟೇ ಅವರು ಮೃತದೇಹಗಳನ್ನು ಪಡೆದುಕೊಳ್ಳಲು ಒಪ್ಪಿಕೊಂಡರು. ಅದಕ್ಕೂ ಮೊದಲು 40 ಗಂಟೆಗಳ ಕಾಲ ಅವರು ಶವಗಳನ್ನು ಸ್ವೀಕರಿಸಲು ನಿರಾಕರಿಸಿದರು.

ಲೋಕಸಭೆಯಲ್ಲಿ ಸರಕಾರ ನೀಡಿರುವ ಮಾಹಿತಿಯ ಪ್ರಕಾರ, 2015ರಲ್ಲಿ ದಲಿತರ ಮೇಲೆ 1010 ದೌರ್ಜನ್ಯ ಪ್ರಕರಣಗಳು ನಡೆದಿವೆ. ಅವುಗಳ ಪೈಕಿ 10 ಪ್ರಕರಣಗಳಲ್ಲಿ ಮಾತ್ರ ಅಪರಾಧ ಸಾಬೀತಾಗಿದೆ.

2016ರಲ್ಲಿ, 1322 ಅಪರಾಧ ಪ್ರಕರಣಗಳು ನಡೆದಿದ್ದು, 22 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

2017ರಲ್ಲಿ, ದಲಿತರ ವಿರುದ್ಧ 1477 ದೌರ್ಜನ್ಯ ಪ್ರಕರಣಗಳು ನಡೆದರೆ, 2018ರಲ್ಲಿ ಈ ಸಂಖ್ಯೆ 1426. ಅವರ ವಿರುದ್ಧ 2019ರಲ್ಲಿ 1416, 2020ರಲ್ಲಿ 1326 ಮತ್ತು 2021ರಲ್ಲಿ 1201 ದೌರ್ಜನ್ಯ ಪ್ರಕರಣಗಳು ನಡೆದಿವೆ.

ಕಳೆದ 7 ವರ್ಷಗಳ ಅವಧಿಯಲ್ಲಿ, ಗುಜರಾತ್ನಲ್ಲಿ ದಲಿತರ ವಿರುದ್ಧ 9,178 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News