ಗುಜರಾತ್: ʼಅಭಿವೃದ್ಧಿʼ ಕಾರ್ಯಗಳಿಗಾಗಿ 16,000 ಹೆಕ್ಟೇರ್ ಭೂಮಿಯನ್ನು ಕಳೆದುಕೊಂಡ ಬುಡಕಟ್ಟು ಜನರು

Update: 2023-08-15 14:20 GMT

ಅಹಮದಾಬಾದ್: ಗುಜರಾತ್ ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನ್ವಯ ಭೂಮಿ ಪಟ್ಟಾ/ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದ 1,82,869 ಬುಡಕಟ್ಟು ಜನರ ಪೈಕಿ 57,054 ಅರ್ಜಿಗಳನ್ನು ವಿವಿಧ ಆಡಳಿತ ಇಲಾಖೆಗಳು ತಳ್ಳಿ ಹಾಕಿವೆ ಎಂದು newindianexpress.com ವರದಿ ಮಾಡಿದೆ.

ಬುಡಕಟ್ಟು ಜನರು ಅರಣ್ಯ ಪ್ರದೇಶದಲ್ಲಿ ಮೊದಲ ಹಕ್ಕು ಪ್ರಸ್ತಾಪ ಸಲ್ಲಿಸಿದ್ದ ಒಟ್ಟು 16,070.58 ಹೆಕ್ಟೇರ್ ಭೂಮಿಯನ್ನು ಅರಣ್ಯ ಸಂರಕ್ಷಣಾ ಕಾಯ್ದೆ, 1980ರ ಅಡಿ ವಿವಿಧ ಅಭಿವೃದ್ಧಿ ಅಗತ್ಯಗಳಿಗಾಗಿ ವರ್ಗಾಯಿಸಲಾಗಿದೆ.

ಪರಿಹಾರಾತ್ಮಕ ಅರಣ್ಯೀಕರಣ ಯೋಜನೆಯಡಿ ಅರಣ್ಯ ಬೆಳೆಸಲು 10,832.3 ಹೆಕ್ಟೇರ್ ಗಳಷ್ಟು ಭೂಮಿಯನ್ನು ನೀಡಲಾಗಿದೆ. ಇದರಿಂದ ಗುಜರಾತ್ ನಲ್ಲಿ ಬಳಕೆಯಾಗಿರುವ ಅರಣ್ಯ ಪ್ರದೇಶಕ್ಕೆ ಹೋಲಿಸಿದರೆ, 5,238.28 ಹೆಕ್ಟೇರ್ ಗಳಷ್ಟು ಭೂಮಿ ನೀಡಿಕೆ ಕಡಿತಗೊಂಡಿರುವುದು ಕಂಡು ಬರುತ್ತದೆ. ಅರಣ್ಯ ಹಕ್ಕು ಕಾಯ್ದೆಯಡಿ ಬುಡಕಟ್ಟು ಜನರು ಭೂಮಿಯ ಪಟ್ಟಾ/ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಕುರಿತು ಆಗಸ್ಟ್ 8ರಂದು ಕಾಂಗ್ರೆಸ್ ಸಂಸದ ಅಮೀ ಯಾಗ್ನಿಕ್ ರಾಜ್ಯಸಭೆಯಲ್ಲಿ ಪ್ರಶ್ನೆಯೆತ್ತಿದ್ದರು.

ಇದಕ್ಕೆ ಉತ್ತರಿಸಿದ್ದ ಕೇಂದ್ರ ಸರ್ಕಾರವು, ನವೆಂಬರ್ 30, 2022ರವರೆಗೆ 1,82,869 ಮಂದಿಯ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಅದೇ ಅವಧಿಯಲ್ಲಿ 57,054 ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ರಾಜ್ಯ ಕಾಂಗ್ರೆಸ್ ವಕ್ತಾರ ಪಾರ್ಥಿವ್ ರಾಜ್ ಕಥ್ವಾಡಿಯಾ, ಸರ್ಕಾರವು ರಾಜ್ಯದಲ್ಲಿನ 91,183 ಬುಡಕಟ್ಟು ಕುಟುಂಬಗಳಿಗೆ ಅರಣ್ಯ ಹಕ್ಕನ್ನು ವಂಚಿಸಿದೆ ಎಂದು ಆರೋಪಿಸಿದ್ದರು.

ಇದರರ್ಥ, ಅರಣ್ಯ ಭೂಮಿ ಕಾಯ್ದೆ ಅಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದ ಶೇ. 49.8ರಷ್ಟು ಬುಡಕಟ್ಟು ಜನರಿಗೆ ಅವರ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಕಥ್ವಾಡಿಯಾ ದೂರಿದ್ದರು. ಈಗಲೂ 34,129 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಈ ಕುರಿತು ಪ್ರಸ್ತಾಪಿಸಿರುವ ಕಥ್ವಾಡಿಯಾ, “ಬಿಜೆಪಿಯು ಬುಡಕಟ್ಟು ಜನರಿಗೆ ದೊಡ್ಡ ಭರವಸೆಗಳನ್ನು ಘೋಷಣೆ ಮಾಡುತ್ತದೆ. ಆದರೆ, ವಾಸ್ತವಕ್ಕೆ ಬಂದಾಗ, ಅವರ ಹಕ್ಕನ್ನು ಮಂಜೂರು ಮಾಡದೆ ಬಿಜೆಪಿ ಸರ್ಕಾರವು ಅವರ ಬೆನ್ನಿಗೆ ಇರಿಯುತ್ತದೆ” ಎಂದು ಆರೋಪಿಸಿದ್ದಾರೆ.

ಈ ಅರ್ಜಿಗಳ ತಿರಸ್ಕಾರಕ್ಕೆ ಕಾರಣಗಳನ್ನು ನೀಡಿದ್ದ ಕೇಂದ್ರ ಸರ್ಕಾರವು, “ರಾಜ್ಯ ಸರ್ಕಾರದ ವರದಿಯಂತೆ ಅರ್ಜಿಗಳ ತಿರಸ್ಕಾರಕ್ಕೆ ಇರುವ ಸಾಮಾನ್ಯ ಕಾರಣಗಳಲ್ಲಿ ಡಿಸೆಂಬರ್ 13, 2005ಕ್ಕೂ ಮುಂಚಿತವಾಗಿ ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡದೆ ಇರುವುದು, ಬಹು ಹಕ್ಕಿನ ಅರ್ಜಿಗಳು ಹಾಗೂ ಸೂಕ್ತ ದಾಖಲಾತಿ ಸಾಕ್ಷಿಗಳ ಕೊರತೆ” ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿತ್ತು.

ಆಗಸ್ಟ್ 7, 2023ರಂದು ಅರಣ್ಯ ಸಂರಕ್ಷಣಾ ಕಾಯ್ದೆ, 1980ರ ಅಡಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ವಿವಿಧ ಯೋಜನೆಗಳಿಗಾಗಿ ವಶಪಡಿಸಿಕೊಂಡಿರುವ ಅರಣ್ಯ ಭೂಮಿಯ ಕುರಿತು ಬಿಜೆಪಿ ಸಂಸದ ವರುಣ್ ಗಾಂಧಿ ಲೋಕಸಭೆಯಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಇಲಾಖೆಯ ಸಚಿವರು ಇಡೀ ದೇಶದ ದತ್ತಾಂಶವನ್ನು ಲೋಕಸಭೆಗೆ ಒದಗಿಸಿದ್ದರು.

ಅದರ ಪ್ರಕಾರ, ಕಳೆದ 15 ವರ್ಷಗಳಲ್ಲಿ ಪರಿಹಾರಾತ್ಮಕ ಅರಣ್ಯೀಕರಣ ಯೋಜನೆಯ ವಿವಿಧ ಪ್ರವರ್ಗಗಳಡಿ ಒಟ್ಟು 16,070.58 ಹೆಕ್ಟೇರ್ ಭೂಮಿಯನ್ನು ವರ್ಗಾಯಿಸಲಾಗಿದೆ. ಬಳಸಿಕೊಳ್ಳಲಾಗಿರುವ ಅರಣ್ಯ ಪ್ರದೇಶದ ಭೂಮಿಗೆ ಹೋಲಿಸಿದರೆ 2008ರಿಂದ 2022-23ರವರೆಗೆ ಪರಿಹಾರಾತ್ಮಕ ಅರಣ್ಯೀಕರಣ ಯೋಜನೆಯ ಭಾಗವಾಗಿ 10,832.3 ಹೆಕ್ಟೇರ್ ಭೂಮಿಯನ್ನು ನೀಡಲಾಗಿದ್ದು, ಕಳೆದ 15 ವರ್ಷಗಳಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಗುಜರಾತ್ ನಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 16,070.58 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲಾಗಿದೆ.

ಗುಜರಾತ್ ನಲ್ಲಿ ಭೂಮಿ ಕಳೆದುಕೊಂಡಿರುವ ಬುಡಕಟ್ಟು ಜನರು

1,82,869 ಬುಡಕಟ್ಟು ಜನರಿಂದ ಭೂಮಿ ಹಕ್ಕಿಗಾಗಿ ಅರ್ಜಿ

57,054 ಅರ್ಜಿಗಳು ಸರ್ಕಾರದಿಂದ ವಜಾ

5,238.28 ಹೆಕ್ಟೇರ್ ಅರಣ್ಯ ಭೂಮಿ ಬಳಕೆಯಲ್ಲಿ ಕಡಿತ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News