ಹರ್ಯಾಣ | ಸವಾಲುಗಳನ್ನು ಎದುರಿಸಿ ಐತಿಹಾಸಿಕವಾಗಿ ಗೆದ್ದ ವಿನೇಶ್ ಫೋಗಟ್‌

Update: 2024-10-08 13:10 GMT

ವಿನೇಶ್ ಫೋಗಟ್‌ | PC : PTI 

ಸೋನಿಪತ್ : ಹರ್ಯಾಣದಲ್ಲಿ ದೇಶದ ಹೆಣ್ಣು ಮಗಳೊಬ್ಬಳು ಪುರುಷ ಪ್ರಧಾನ ರಾಜಕೀಯದ ಎಲ್ಲ ಸವಾಲುಗಳನ್ನು, ದಾಳಿಗಳನ್ನು, ಸಂಚುಗಳನ್ನು ಸಮರ್ಥವಾಗಿ ಎದುರಿಸಿ ಎದುರಾಳಿಯನ್ನು ಚುನಾವಣಾ ಅಖಾಡದಲ್ಲಿ ಮಕಾಡೆ ಮಲಗಿಸಿ ಬಿಟ್ಟಿದ್ದಾಳೆ.

ಆಕೆ ಪ್ಯಾರಿಸ್ ನಲ್ಲಿ ಚಿನ್ನ ಗೆಲ್ಲದಿದ್ದರೂ ತನ್ನ ತಾಯ್ನಾಡಲ್ಲಿ ಅದಕ್ಕಿಂತಲೂ ದೊಡ್ಡ ಸವಾಲನ್ನು ಗೆದ್ದು ಬೀಗಿದ್ದಾರೆ. ಇಡೀ ದೇಶದ ಹೆಣ್ಣು ಮಕ್ಕಳಿಗೆ, “ನೀವೂ ಗೆಲ್ಲಬಹುದು. ಎಂದೂ ಸೋಲೊಪ್ಪಿಕೊಂಡು ಶರಣಾಗಬೇಡಿ” ಎಂಬ ಸಂದೇಶ ರವಾನಿಸಿದ್ದಾರೆ.

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜುಲಾನದಿಂದ ಕಣಕ್ಕಿಳಿದಿದ್ದ ವಿನೇಶ್ ಫೋಗಟ್‌ ಬಿಜೆಪಿ ಅಭ್ಯರ್ಥಿ ಯೋಗೇಶ್ ಬೈರಾಗಿಯನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದ್ದಾರೆ. ಆಕೆ ಬಿಜೆಪಿ ಅಭ್ಯರ್ಥಿ ವಿರುದ್ಧ ಆರು ಸಾವಿರ ಮತಗಳ ಮುನ್ನಡೆ ಪಡೆದಿದ್ದಾರೆ

ಹರ್ಯಾಣದಲ್ಲಿ ವಿನೇಶ್ ರ ಪಕ್ಷ ಕಾಂಗ್ರೆಸ್ ಬಹುಮತ ಗಳಿಸುವಲ್ಲಿ ಮುಗ್ಗರಿಸಿ ಬಿದ್ದಿದೆ. ಅಲ್ಲಿ ಅದಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ಬಿಜೆಪಿ ಎಲ್ಲ ನಿರೀಕ್ಷೆಗಳನ್ನು ಸುಳ್ಳಾಗಿಸಿ ಮತ್ತೆ ಗೆದ್ದು ಬೀಗುತ್ತಿದೆ. ಆದರೆ ತಮ್ಮ ಬೃಹತ್ ಸಂಘಟನಾ ಶಕ್ತಿ, ರಾಜಕೀಯ ಶಕ್ತಿ, ಹಣದ ಶಕ್ತಿ, ಅಧಿಕಾರದ ಶಕ್ತಿ ಎಲ್ಲವುಗಳ ಎದುರು ತೊಡೆತಟ್ಟಿದ್ದ ಕುಸ್ತಿಪಟು ವಿನೇಶ್ ಫೋಗಟ್‌ ರನ್ನು ಮಣ್ಣು ಮುಕ್ಕಿಸುವ ಬಿಜೆಪಿಯ ಇರಾದೆ ಜುಲಾನದಲ್ಲಿ ಸಂಪೂರ್ಣ ವಿಫಲವಾಗಿದೆ.

ಅಲ್ಲಿ ಈ ದೇಶದ ಚಾಂಪಿಯನ್ ಹೆಣ್ಣು ಮಗಳು ಜಯಭೇರಿ ಬಾರಿಸಿದ್ದಾಳೆ. ಅಲ್ಲಿನ ಮತದಾರರು ಆಕೆಯ ಕೈ ಹಿಡಿದಿದ್ದಾರೆ. ಬಿಜೆಪಿ ಪ್ರಬಲ ಅಭ್ಯರ್ಥಿ ಭಾರತೀಯ ಸೇನೆಯ ಮಾಜಿ ಅಧಿಕಾರಿ ಹಾಗು ಕಮರ್ಷಿಯಲ್ ಪೈಲಟ್ ಯೋಗೇಶ್ ಬೈರಾಗಿಯನ್ನು ಜುಲಾನ ಮತದಾರರು ಸೋಲಿಸಿದ್ದಾರೆ.

ಕುಸ್ತಿಪಟು ವಿನೇಶ್ ತಮ್ಮ ಛಲ ಹಾಗು ಹೋರಾಟಗಳ ಮೂಲಕವೇ ಈ ದೇಶದ ಜನರ ಪ್ರೀತಿ, ಗೌರವ ಗಳಿಸಿದವರು. ಊರವರ ಉಸಾಬರಿ ನಮಗೇಕೆ ಎಂದು ಸುಮ್ಮನಾಗದೆ ಮಹಿಳಾ ಕುಸ್ತಿಪಟುಗಳ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಿ ಬೀದಿಗಿಳಿದವರು. ಅದಕ್ಕಾಗಿ ಆಡಳಿತಾರೂಢ ಬಿಜೆಪಿಯನ್ನು, ಅದರ ಪ್ರಭಾವೀ ಸಂಸದನನ್ನು ಎದುರು ಹಾಕಿಕೊಂಡವರು.

ಹೆದರಿಕೆಗೆ, ಬೆದರಿಕೆಗೆ, ಬೈಗುಳಕ್ಕೆ, ಟ್ರೋಲ್ ಗೆ, ಅವಹೇಳನಕ್ಕೆ, ರಾಜಕೀಯ ಪ್ರಭಾವಕ್ಕೆ ಯಾವುದಕ್ಕೂ ಬಗ್ಗದೆ, ಜಗ್ಗದೆ ಪೊಲೀಸ್ ದೌರ್ಜನ್ಯವನ್ನೂ ಎದುರಿಸಿ ಅನ್ಯಾಯದ ವಿರುದ್ಧ ಹೋರಾಡಿದವರು. ಲಾಠಿಗೂ ಹೆದರದೆ ಮುನ್ನುಗ್ಗಿದವರು. ಈ ಎಲ್ಲ ಹೋರಾಟದ ನಡುವೆಯೂ ತಮ್ಮ ಕುಸ್ತಿ ಅಭ್ಯಾಸವನ್ನು ಬಿಡದೆ,ತನ್ನ ವಿರುದ್ಧ ದೇಶದ ಕುಸ್ತಿಫೆಡೆರೇಶನ್ ಸಂಚು ಹೂಡಿದರೂ ಅದನ್ನು ಮೆಟ್ಟಿ ನಿಂತು ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್ ಗೆ ತಲುಪಿದವರು.

ಅಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ರನ್ನೇ ಸದೆಬಡಿದವರು ಹಾಗು ಚಿನ್ನದ ಪದಕ ಪಡೆಯುವ ಹಂತಕ್ಕೆ ಹೋಗಿ ತಲುಪಿದವರು ವಿನೇಶ್ ಫೋಗಟ್‌. ಆದರೆ ವಿಧಿಯಾಟ ಬೇರೆಯಿತ್ತು. ಒಲಿಂಪಿಕ್ಸ್ ಚಿನ್ನ ಆಕೆಗೆ ಕೊನೆ ಕ್ಷಣದಲ್ಲಿ ಕೈತಪ್ಪಿತು. ಸ್ಪರ್ಧಿಸುವ ಅವಕಾಶವೇ ನಿರಾಕರಿಯಾಯಿತು. ಆದರೂ ಆಕೆ ಮಾತ್ರ ಸೋಲಲಿಲ್ಲ, ಅಂಜಲಿಲ್ಲ, ಹಿಂಜರಿಯಲಿಲ್ಲ. ಪ್ರಧಾನಿ ಕರೆ ಮಾಡಿ ಅದರಲ್ಲೂ ಪ್ರಚಾರ ಗಿಟ್ಟಿಸಲು ನೋಡಿದಾಗ “ನಿಮ್ಮ ಪ್ರಚಾರ ಸ್ಟಂಟ್ ನಲ್ಲಿ ನಾನಿಲ್ಲ” ಎಂದು ನಿರಾಕರಿಸಿಬಿಟ್ಟರು.

ತನ್ನ ತಾಯ್ನಾಡಿನಲ್ಲಿ ಚುನಾವಣೆ ಘೋಷಣೆಯಾದಾಗ ಇನ್ನು ನಾನು ರಾಜಕೀಯಕ್ಕೆ ಇಳಿಯಬೇಕು, ಹೆಣ್ಣು ಮಕ್ಕಳನ್ನು ಸೋಲಿಸುವ ರಾಜಕಾರಣದಲ್ಲಿ ನಾನಿರಬೇಕು ಎಂದು ರಾಜಕೀಯಕ್ಕೆ ಇಳಿದರು, ಕಾಂಗ್ರೆಸ್ ಸೇರಿದರು. ಆಕೆಯನ್ನು ಸೋಲಿಸಲೆಂದೇ ಬಿಜೆಪಿ ತನ್ನೆಲ್ಲ ಶಕ್ತಿ ವಿನಿಯೋಗಿಸಿತು. ಅತ್ಯಂತ ಪ್ರಬಲ ಅಭ್ಯರ್ಥಿಯನ್ನು ಆಕೆಯ ವಿರುದ್ಧ ಕಣಕ್ಕಿಳಿಸಿತು. ಆಕೆ ಎದುರು ಹತ್ತಾರು ಸಮಸ್ಯೆ ತಂದಿಡಲು ನೋಡಿತು. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ವಿನೇಶ್ ಫೋಗಟ್‌ ಗೆಲುವಿನ ನಗೆ ಬೀರಿದ್ದಾರೆ.

ಇದು ಹೆಣ್ಣು ಸಶಕ್ತಳಲ್ಲ, ಆಕೆಗೆ ರಾಜಕೀಯದ ಒಳಸುಳಿಯಲ್ಲಿ ಗೆಲ್ಲೋದು ಅಸಾಧ್ಯ, ಆಕೆ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಹೋಗಬೇಕು, ರಾಜಕೀಯ ಪ್ರಭಾವಿಗಳನ್ನು ಎದುರು ಹಾಕಿಕೊಳ್ಳಬಾರದು, ಹೋರಾಟಕ್ಕೆ ಇಳಿಯಬಾರದು ಎನ್ನುವ ಎಲ್ಲರಿಗೂ ವಿನೇಶ್ ಫೋಗಟ್‌ ರ ಗೆಲುವು ಪಾಠ ಕಲಿಸಿದೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News