ಟೈರ್ ಸ್ಫೋಟಗೊಂಡ ಬಳಿಕ ವಿಮಾನ ಹಾರಾಟವನ್ನು ರದ್ದುಪಡಿಸಿದ ಹಾಂಕಾಂಗ್: 11 ಪ್ರಯಾಣಿಕರಿಗೆ ಗಾಯ
ಹಾಂಗ್‌ಕಾಂಗ್: ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಶನಿವಾರ ಹಾಂಗ್‌ಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಾಗಿದ್ದ ಕ್ಯಾಥೆ ಪೆಸಿಫಿಕ್ ಸಿಎಕ್ಸ್880(0293.ಎಚ್‌ಕೆ) ವಿಮಾನವು ತನ್ನ ಹಾರಾಟವನ್ನು ರದ್ದುಗೊಳಿಸಿದ್ದು, ಈ ಸಂದರ್ಭದಲ್ಲಿ 11 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಕ್ಯಾಥೆ ವಿಮಾನ ಯಾನ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ ಎಂದು indiatoday.in ವರದಿ ಮಾಡಿದೆ.
ಈ ವಿಮಾನವು 17 ಸಿಬ್ಬಂದಿಗಳು ಹಾಗೂ 293 ಪ್ರಯಾಣಿಕರನ್ನು ಹೊತ್ತು ಹಾಂಗ್‌ಕಾಂಗ್‌ನಿಂದ ಲಾಸ್ ಎಂಜಲೀಸ್‌ಗೆ ಪ್ರಯಾಣ ಬೆಳೆಸಿತ್ತು. ಪ್ರಮಾಣೀಕೃತ ಪ್ರಕ್ರಿಯೆ ಅನುಸಾರ ಈ ವಿಮಾನದಲ್ಲಿ ತಾಂತ್ರಿಕ ದೋಷ ಇರುವುದನ್ನು ಸಿಬ್ಬಂದಿಗಳನ್ನು ಪತ್ತೆ ಹಚ್ಚಿದ ನಂತರ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು ಎಂದು ಹೇಳಲಾಗಿದೆ.
ವಿಮಾನದ ಹಿಂಬಾಗಿಲಿನಿಂದ ಮುನ್ನೆಚ್ಚರಿಕೆಯ ನಿರ್ಗಮನಕ್ಕಾಗಿ ಇರುವ ಐದು ಮೆಟ್ಟಿಲಿನ ಪಾರಾಗುವ ಬಾಗಿಲನ್ನು ಬಳಸುವಾಗ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಕ್ಯಾಥೆ ತಿಳಿಸಿದೆ.
"ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 11 ಮಂದಿ ಪ್ರಯಾಣಿಕರ ಪೈಕಿ 9 ಮಂದಿ ಪ್ರಯಾಣಿಕರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಮ್ಮ ಸಹೋದ್ಯೋಗಿಗಳು ಆಸ್ಪತ್ರೆಯಲ್ಲೇ ಉಳಿದಿರುವ ಇನ್ನಿಬ್ಬರು ಪ್ರಯಾಣಿಕರು ಹಾಗೂ ಅವರ ಕುಟುಂಬಗಳಿಗೆ ತಮ್ಮ ನೆರವು ಮುಂದುವರಿಸಲಿದ್ದಾರೆ" ಎಂದೂ ಕ್ಯಾಥೆ ಹೇಳಿದೆ.
ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ತಾನು ಪ್ರಾಮಾಣಿಕ ಕ್ಷಮೆ ಕೋರುತ್ತೇನೆ ಎಂದು ಕ್ಯಾಥೆ ತಿಳಿಸಿದೆ.
ವಿಮಾನದ ಟೈರೊಂದು ಅತಿಯಾದ ಶಾಖದಿಂದ ಸ್ಫೋಟಗೊಂಡಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ RTHK ಸುದ್ದಿ ಸಂಸ್ಥೆ ವರದಿ ಮಾಡಿದೆ.