ಸಮಾಜವಾದಿ ಪಕ್ಷ-ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರವನ್ನು ನೆಲಸಮಗೊಳಿಸುತ್ತಾರೆ: ಪ್ರಧಾನಿ ಮೋದಿ
ಲಕ್ನೋ: ಸಮಾಜವಾದಿ ಪಕ್ಷ-ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರವನ್ನು ಬುಲ್‌ಡೋಜರ್ ಬಳಸಿ ನೆಲಸಮಗೊಳಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ಅಯೋಧ್ಯೆಗಿಂತ ಸುಮಾರು 70 ಕಿಮೀ ದೂರದಲ್ಲಿರುವ ಬಾರಾಬಂಕಿಯಲ್ಲಿ ಇಂದು ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು. “ಎಸ್‌ಪಿ-ಕಾಂಗ್ರೆಸ್ ನಾಯಕರು ಕೋರ್ಟಿನ ರಾಮ ಮಂದಿರ ನಿರ್ಧಾರ ವಾಪಸ್ ಪಡೆಯಲು ಬಯಸುತ್ತಿದ್ದಾರೆ…ರಾಮ ಮಂದಿರದಿಂದ ಉಪಯೋಗವಿಲ್ಲ ಎನ್ನುತ್ತಿದ್ದಾರೆ…ಇಂತಹ ಜನರು ತಮ್ಮ ಠೇವಣಿ ಕಳೆದುಕೊಳ್ಳುವಂತೆ ಮಾಡುವ ಮೂಲಕ ಅವರನ್ನು ಶಿಕ್ಷಿಸಬೇಕು,” ಎಂದು ಪ್ರಧಾನಿ ಹೇಳಿದರು.
ಇಂಡಿಯಾ ಮೈತ್ರಿಕೂಟಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ನಾಲ್ಕು ಹಂತಗಳ ಚುನಾವಣೆ ಬಳಿಕ ಮಹಾಮೈತ್ರಿ ಮರಿದು ಬೀಳುವ ಲಕ್ಷಣಗಳು ಕಾಣಿಸುತ್ತಿದೆ ಎಂದರು.
“ಚುನಾವಣೆಗಳು ನಡೆದ ಹಾಗೆ ಇಂಡಿಯಾ ಮೈತ್ರಿಕೂಟ ಮುರಿಯುತ್ತಿದೆ, ಎಸ್‌ಪಿಯ ರಾಜಕುಮಾರ ಈ ದಿನಗಳಲ್ಲಿ ಹೊಸ ಬುವಾ(ಮಮತಾ) ಕಂಡುಕೊಂಡಿದ್ದಾರೆ. ಆಕೆ ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ,” ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಪ್ರಧಾನಿ, “ರಾಜಕುಮಾರ ಈಗಾಗಲೇ ಟಿಕೆಟ್ ಬುಕ್ ಮಾಡಿದ್ದಾರೆ ಹಾಗೂ ಫಲಿತಾಂಶ ಜೂನ್ 4 ರಂದು ಹೊರಬಿದ್ದ ನಂತರ ಯಾವುದಾದರೂ ವಿದೇಶಕ್ಕೆ ಹೋಗುತ್ತಾರೆ,” ಎಂದು ಹೇಳಿದರು.
ರಾಹುಲ್ ವಯನಾಡಿನಿಂದ ಓಡಿ ಹೋದರು ಹಾಗೂ ಅಮೇಥಿಯಿಂದಲೂ ಓಡಿದರು. “ಅವರು ಅಮೇಥಿಯಿಂದ ಸ್ಪರ್ಧಿಸುವ ಧೈರ್ಯ ತೋರಿಲ್ಲ, ಕಾಂಗ್ರೆಸ್ ಮಿಷನ್ 50 ಗಾಗಿ ಶ್ರಮಿಸುತ್ತಿದೆ ಎಂದು ತಿಳಿದು ಬಂತು,” ಎಂದು ಪ್ರಧಾನಿ ಹೇಳಿದರು.