2019ರಲ್ಲಿ ರಾಮ ಮಂದಿರ ಪರ ತೀರ್ಪು ನೀಡಿದ್ದ ಸುಪ್ರೀಂ ನ್ಯಾಯಾಧೀಶರಿಗೆ ʼಪ್ರಾಣ ಪ್ರತಿಷ್ಠಾಪನೆʼಗೆ ಆಹ್ವಾನ

Update: 2024-01-19 12:49 GMT

ಹೊಸದಿಲ್ಲಿ: ಬಾಬರಿ ಮಸೀದಿ ಕೆಡವಲಾದ ಸ್ಥಳವನ್ನು ಅಯೋಧ್ಯೆ ರಾಮ ಮಂದಿರಕ್ಕೆ ನೀಡುವ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ 2019ರ ಪೀಠದಲ್ಲಿದ್ದ ಐವರು ನ್ಯಾಯಾಧೀಶರಿಗೆ ಅಯೋಧ್ಯೆ ರಾಮ ಮಂದಿರದ 'ಪ್ರಾಣ ಪ್ರತಿಷ್ಠಾಪನೆ ' ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ ಎಂದು ndtv ವರದಿ ಮಾಡಿದೆ.

ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ, ಈಗಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಅಬ್ದುಲ್ ನಝೀರ್ ತೀರ್ಪು ನೀಡಿದ ಪೀಠದಲ್ಲಿದ್ದ ನ್ಯಾಯಾಧೀಶರಾಗಿದ್ದಾರೆ.

ನವೆಂಬರ್ 9, 2019 ರಂದು ಐವರು ಹಿರಿಯ ನ್ಯಾಯಾಧೀಶರು 16 ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸಲಾದ ಬಾಬರಿ ಮಸೀದಿಯ ಕೆಳಗೆ ಒಂದು ರಚನೆಯು ಅಸ್ತಿತ್ವದಲ್ಲಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ವರದಿಯನ್ನು ಉಲ್ಲೇಖಿಸಿ, ಶತಮಾನದಷ್ಟು ಹಳೆಯದಾದ ವಿವಾದಕ್ಕೆ ಅಂತಿಮ ತೀರ್ಪು ನೀಡಿದ್ದರು.

ಚಂದ್ರಚೂಡ್ ಅವರನ್ನು ಹೊರತುಪಡಿಸಿ, ತೀರ್ಪು ನೀಡಿದ ಪೀಠದಲ್ಲಿದ್ದ ಎಲ್ಲರೂ ನಿವೃತ್ತರಾಗಿದ್ದಾರೆ. ಗೊಗೋಯ್ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಅಬ್ದುಲ್ ನಝೀರ್ ಅವರು ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದಾರೆ.

ಸುಮಾರು 8,000 ಅತಿಥಿಗಳ ಪಟ್ಟಿಯಲ್ಲಿ ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಅನುಪಮ್ ಖೇರ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ರಂತಹ ಭಾರತ ಕ್ರಿಕೆಟಿಗರೂ ಸೇರಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ ಮತ್ತು ಆನಂದ್ ಮಹೀಂದ್ರಾ ಅವರಂತಹ ಉದ್ಯಮಿಗಳೂ ಪಟ್ಟಿಯಲ್ಲಿದ್ದಾರೆ.‌

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News