ಹಿಮಾಚಲದಲ್ಲಿ ನಿಲ್ಲದ ಮಳೆ ಅಬ್ಬರ; 71 ಮಂದಿ ಮೃತ್ಯು

Update: 2023-08-17 02:30 GMT

ಶಿಮ್ಲಾ: ಪ್ರಕೃತಿ ವಿಕೋಪದಿಂದ ಕಂಗೆಟ್ಟಿರುವ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಹಾಗೂ ದಿಢೀರ್ ಪ್ರವಾಹ, ಧಾರಾಕಾರ ಮಳೆ, ಮೇಘಸ್ಫೋಟದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, 71 ಮಂದಿ ಮಳೆ ಸಂಬಂಧಿ ಅನಾಹುತಗಳಲ್ಲಿ ಮೃತಪಟ್ಟಿದ್ದಾರೆ ಎಂದು ರಾಜ್ಯದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಓಂಕಾರ್ ಶರ್ಮಾ ಪ್ರಕಟಿಸಿದ್ದಾರೆ.

ಕಂಗಾರ ಜಿಲ್ಲೆಯಲ್ಲಿ ಪಾಂಗ್ ಅಣೆಕಟ್ಟಿನಿಂದ ಭಾರಿ ನೀರು ಹೊರಕ್ಕೆ ಬಿಡಲಾಗಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಪರಿಣಾಮವಾಗಿ ಪರಿಹಾರ ಕಾರ್ಯಾಚರಣೆ ತಂಡಗಳು 1700 ಮಂದಿಯನ್ನು ಸುರಕ್ಷಿತ ಸ್ಥಗಳಗಳಿಗೆ ಕರೆದೊಯ್ದಿವೆ. ಜಿಲ್ಲಾಡಳಿತ, ಸೇನೆ ಮತ್ತು ಭಾರತೀಯ ವಾಯುಪಡೆಗಳ ಸಂಘಟಿತ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಶಿಮ್ಲಾ ನಗರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವ ಅಪಾಯ ಇದೆ. ನಗರಾಭಿವೃದ್ಧಿ ಕಚೇರಿಯ ಆರು ಮಹಡಿ ಕಟ್ಟಡದ ಹಿಂದೆ ವ್ಯಾಪಕ ಭೂಕುಸಿತ ಸಂಭವಿಸಿದ್ದು, ಕಟ್ಟಡಕ್ಕೆ ಆತಂಕ ಎದುರಾಗಿದೆ.

ಬುಧವಾರ ಭಾರಿ ಭೂಕುಸಿತದಿಂದಾಗಿ ಮಹಾನಗರ ಪಾಲಿಕೆಯ ಕಸಾಯಿಖಾನೆ ಹಾಗೂ ಇತರ ಹಲವು ಮನೆಗಳು ಹಾನಿಗೀಡಾಗಿದ್ದು, ದುರ್ಘಟನೆಯಲ್ಲಿ ಇಬ್ಬರು ಜೀವಂತ ಸಮಾಧಿಯಾಗಿದ್ದಾರೆ. ಹಲವು ಕಟ್ಟಡಗಳು ಕುಸಿಯುವ ಅಪಾಯವಿದ್ದು, 35 ಮನೆಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ.

ಶಿಮ್ಲಾದ ಸಮ್ಮರ್ಹಿಲ್ ಪ್ರದೇಶದಲ್ಲಿ ನವೀಕೃತ ಶಿವ ಬಾವ್ಡಿ ದೇವಾಲಯ ಬಳಿ ಸಂಭವಿಸಿದ ಭಾರೀ ಭೂಕುಸಿತದ ಅವಶೇಷಗಳ ಅಡಿಯಿಂದ 13ನೇ ಮೃತದೇಹವನ್ನು ಪರಿಹಾರ ಸಿಬ್ಬಂದಿ ಹೊರ ತೆಗೆದಿದ್ದಾರೆ. ಏಳು ಮಂದಿಯ ಒಂದು ಇಡೀ ಕುಟುಂಬ, ಹಿಮಾಚಲ ಪ್ರದೇಶ ವಿವಿಯ ಇಬ್ಬರು ಪ್ರೊಫೆಸರ್ಗಳು ಮತ್ತು ಭಕ್ತರು ಸೋಮವಾರ ಜೀವಂತ ಸಮಾಧಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News