ಉಕ್ರೇನ್ ಮೇಲಿನ ಅಣು ಯುದ್ಧ ತಡೆದರೇ ಪ್ರಧಾನಿ ಮೋದಿ ?

Update: 2024-03-11 12:38 GMT

ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ: ಸಿಎನ್‌ಎನ್ ಪ್ರಕಟಿಸಿದ್ದ ತನ್ನ ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಜಿಮ್ ಶುಟೊ ಅವರ ‘ವಿಶೇಷ ಲೇಖನ :2022ರ ಕೊನೆಯಲ್ಲಿ ಉಕ್ರೇನ್‌ನಲ್ಲಿ ರಷ್ಯದ ಸಂಭಾವ್ಯ ಪರಮಾಣು ದಾಳಿಗೆ ಅಮೆರಿಕದ ‘ಕಠಿಣ’ ಸಿದ್ಧತೆ’ ಎಂಬ ಶೀರ್ಷಿಕೆಯ ಲೇಖನವನ್ನು ಭಾರತೀಯ ಮಾಧ್ಯಮಗಳು ಬೇರೆಯೇ ರೀತಿ ವರದಿ ಮಾಡಿವೆ.

ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಶೀರ್ಷಿಕೆಗಳಿಗೆ ವ್ಯತಿರಿಕ್ತವಾಗಿ ಸಿಎನ್‌ಎನ್ ವರದಿಯು ಉಕ್ರೇನ್ ಮೇಲೆ ಸಂಭಾವ್ಯ ಪರಮಾಣು ದಾಳಿಯನ್ನು ತಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಮುಖ್ಯ ಕಾರಣರಾಗಿದ್ದರು ಎಂದು ಹೇಳಿಯೇ ಇರಲಿಲ್ಲ.

ಜಿಮ್ ಅವರ ಲೇಖನದಲ್ಲಿ ಉಲ್ಲೇಖಿಸಲಾಗಿದ್ದ ಸೂಕ್ಷ್ಮ ವಿವರಗಳನ್ನು ಅನುಸರಿಸದೆ ಮೋದಿಯವರನ್ನು ವೈಭವೀಕರಿಸಲು ಹಲವಾರು ಭಾರತೀಯ ಮಾಧ್ಯಮಗಳು ವಾಸ್ತವಾಂಶಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದು ಟೀಕೆಗೆ ಕಾರಣವಾಗಿದೆ.

ಸಿಎನ್‌ಎನ್ ವರದಿಯು 2022ರ ಕೊನೆಯಲ್ಲಿ ರಷ್ಯದಿಂದ ಸಂಭಾವ್ಯ ಪರಮಾಣು ದಾಳಿಗಾಗಿ ಬೈಡನ್ ಆಡಳಿತದ ಸಿದ್ಧತೆಗಳನ್ನು ಪ್ರಮುಖವಾಗಿ ಬಿಂಬಿಸಿತ್ತು. ಅದು ವಿಶೇಷವಾಗಿ, ರಷ್ಯವು ಯುದ್ಧತಂತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಕುರಿತು ಕಳವಳಗಳಿಗೆ ಒತ್ತು ನೀಡಿತ್ತು.

ರಷ್ಯ ಯುದ್ಧತಂತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂದು ಬೈಡನ್ ಆಡಳಿತವು ವಿಶೇಷವಾಗಿ ಕಳವಳಗೊಂಡಿತ್ತು ಎಂದು ಜಿಮ್ ತನ್ನ ಲೇಖನದಲ್ಲಿ ಹೇಳಿದ್ದರು.

ರಷ್ಯ ಇಂತಹ ದಾಳಿಯನ್ನು ನಡೆಸುವುದನ್ನು ನಿರುತ್ತೇಜಿಸಲು ಚೀನಾ ಮತ್ತು ಭಾರತ ಸೇರಿದಂತೆ ಮಿತ್ರರಾಷ್ಟ್ರಗಳ ನೆರವನ್ನು ಪಡೆಯಲು ಅಮೆರಿಕ ಆಡಳಿತದ ಪ್ರಯತ್ನಗಳನ್ನೂ ವರದಿಯು ಬಹಿರಂಗಗೊಳಿಸಿದೆ.

 

ಆದರೆ ಭಾರತೀಯ ಮಾಧ್ಯಮಗಳು ‘ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿ ಸಂಪರ್ಕವು ಉಕ್ರೇನ್‌ನಲ್ಲಿ ಸಂಭಾವ್ಯ ಪರಮಾಣು ದಾಳಿಯನ್ನು ತಡೆಯಲು ನೆರವಾಗಿತ್ತು:ಸಿಎನ್‌ಎನ್ ವರದಿ‘ (ಇಂಡಿಯಾ ಟುಡೇ), ‘ಉಕ್ರೇನ್‌ನಲ್ಲಿ ಸಂಭಾವ್ಯ ಪರಮಾಣು ದಾಳಿಯನ್ನು ತಡೆಯಲು ನೆರವಾದ ಪ್ರಧಾನಿ ಮೋದಿ:ವರದಿ’ (ಹಿಂದುಸ್ಥಾನ ಟೈಮ್ಸ್) ಮತ್ತು ‘ಪುಟಿನ್ ಉಕ್ರೇನ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರ ಬಳಕೆಯನ್ನು ತೊರೆಯುವಂತೆ ಮಾಡಿದ ಭಾರತದ ಪ್ರಭಾವ :ವರದಿ’ (ಡಬ್ಲ್ಯುಐಒಎನ್)ಯಂತಹ ತಪ್ಪುದಾರಿಗೆಳೆಯುವ ಶೀರ್ಷಿಕೆಗಳ ಸುದ್ದಿಗಳನ್ನು ಪ್ರಕಟಿಸಿದ್ದವು.

 

 

ಭಾರತೀಯ ಮಾಧ್ಯಮಗಳು ಬಿಕ್ಕಟ್ಟನ್ನು ನಿವಾರಿಸಲು ಹಲವು ರಾಷ್ಟ್ರಗಳು ಮತ್ತು ನಾಯಕರು ಜಂಟಿ ಪ್ರಯತ್ನಗಳನ್ನು ನಡೆಸಿದ್ದರು ಎನ್ನುವ ಸಿ ಎನ್ ಎನ್ ನ ಲೇಖನದಲ್ಲಿದ್ದ ನಿರ್ಣಾಯಕ ಅಂಶವನ್ನೇ ಮರೆ ಮಾಚಿದ್ದವು . ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ಮತ್ತು ಸಾರ್ವಜನಿಕ ಹೇಳಿಕೆಗಳು ಅಂತರರಾಷ್ಟ್ರೀಯ ಕಳವಳವನ್ನು ಪ್ರದರ್ಶಿಸಲು ವಿಶಾಲ ಕಾರ್ಯತಂತ್ರದ ಭಾಗವಾಗಿದ್ದವೇ ಹೊರತು ಯಾವುದೇ ಓರ್ವ ನಾಯಕನ ಏಕೈಕ ನಿರ್ಣಾಯಕ ಕ್ರಮವಾಗಿರಲಿಲ್ಲ ಎಂದು ಸಿಎನ್‌ಎನ್ ಲೇಖನವು ಸ್ಪಷ್ಟವಾಗಿ ಹೇಳಿದೆ.

ಇದಲ್ಲದೆ ರಷ್ಯವು ಯುದ್ಧತಂತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ಥಳಕ್ಕೆ ಸಾಗಿಸುವುದನ್ನು ಪತ್ತೆ ಹಚ್ಚುವ ತಮ್ಮ ಸಾಮರ್ಥ್ಯದ ಬಗ್ಗೆ ಅಮೆರಿಕದ ಅಧಿಕಾರಿಗಳು ಎದುರಿಸಿದ್ದ ಅನಿಶ್ಚಿತತೆಗಳನ್ನು ವರದಿಯು ಎತ್ತಿ ತೋರಿಸಿದೆ. ವ್ಯೂಹಾತ್ಮಕ ಪರಮಾಣು ಶಸ್ತ್ರಾಸ್ತ್ರಗಳಿಗಿಂತ ಭಿನ್ನವಾಗಿ ಯುದ್ಧತಂತ್ರ ಶಸ್ತ್ರಾಸ್ತ್ರಗಳು ಸಾಕಷ್ಟು ಸಣ್ಣದಾಗಿದ್ದು, ಸದ್ದಿಲ್ಲದೆ ಅವುಗಳನ್ನು ಸಾಗಿಸಬಹುದು ಮತ್ತು ಯುದ್ಧರಂಗದಲ್ಲಿ ಅದಾಗಲೇ ನಿಯೋಜಿತ ಸಾಂಪ್ರದಾಯಿಕ ವ್ಯವಸ್ಥೆಗಳಿಂದ ಅವುಗಳನ್ನು ಹಾರಿಸಬಹುದು.

ರಷ್ಯವು ಪರಮಾಣು ದಾಳಿಯನ್ನು ನಡೆಸುವುದನ್ನು ತಡೆಯಲು ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಮತ್ತು ಜಂಟಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲಿ ಸೇರಿದಂತೆ ಅಮೆರಿಕದ ಹಲವಾರು ಹಿರಿಯ ಆಡಳಿತಾಧಿಕಾರಿಗಳು ತಮ್ಮ ರಷ್ಯನ್ ಸಹವರ್ತಿಗಳೊಂದಿಗೆ ನೇರ ಸಂವಹನದಲ್ಲಿ ತೊಡಗಿಕೊಂಡಿದ್ದರು. ಬ್ಲಿಂಕೆನ್ ಅವರು ರಷ್ಯದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್ ಅವರಿಗೆ ಅಮೆರಿಕದ ಕಳವಳಗಳನ್ನು ನೇರವಾಗಿ ತಿಳಿಸಿದ್ದರು. ಅಧ್ಯಕ್ಷ ಜೋ ಬೈಡನ್ ಅವರು ರಷ್ಯದ ವಿದೇಶಿ ಗುಪ್ತಚರ ಸೇವೆಯ ಮುಖ್ಯಸ್ಥ ಸೆರ್ಗಿ ನರಿಷ್ಕಿನ್ ಅವರೊಂದಿಗೆ ಮಾತನಾಡಲು ಸಿಐಎ ನಿರ್ದೇಶಕ ಬಿಲ್ ಬರ್ನ್ಸ್ ಅವರನ್ನು ಟರ್ಕಿಗೆ ಕಳುಹಿಸಿದ್ದರು ಎಂದೂ ವರದಿಯು ಹೇಳಿದೆ.

ಈ ರಾಜತಾಂತ್ರಿಕ ಪ್ರಯತ್ನಗಳ ಜೊತೆಗೆ ಅಮೆರಿಕವು ರಷ್ಯದ ಸಂಭಾವ್ಯ ಪರಮಾಣು ದಾಳಿಯ ವಿರುದ್ಧ ತುರ್ತು ಯೋಜನೆಗಳನ್ನು ರೂಪಿಸಲು ತನ್ನ ಮಿತ್ರದೇಶಗಳೊಂದಿಗೆ ಕೈಜೋಡಿಸಿತ್ತು ಮತ್ತು ಅಂತಹ ಕ್ರಮದ ಗಂಭೀರ ಪರಿಣಾಮಗಳ ಬಗ್ಗೆ ರಷ್ಯಕ್ಕೆ ಎಚ್ಚರಿಕೆಗಳನ್ನು ನೀಡಿತ್ತು ಎಂದು ವರದಿಯು ತಿಳಿಸಿದೆ.

ಈ ನಿರ್ಣಾಯಕ ವಿವರಗಳ ಹಿನ್ನೆಲೆಯಲ್ಲಿ ಪರಮಾಣು ದಾಳಿಯನ್ನು ತಡೆಯಲು ಮೋದಿಯವರೇ ಮುಖ್ಯ ಕಾರಣರಾಗಿದ್ದರು ಎಂದು ಭಾರತೀಯ ಮಾಧ್ಯಮಗಳು ಬಿಂಬಿಸಿರುವುದು ತಪ್ಪು ಎನ್ನುವುದು ಸ್ಪಷ್ಟವಾಗಿದೆ. ಈ ತಪ್ಪು ವ್ಯಾಖ್ಯಾನವು ಜವಾಬ್ದಾರಿಯುತ ಪತ್ರಿಕೋದ್ಯಮ ಮತ್ತು ಸೂಕ್ಷ್ಮ ವಿಷಯಗಳಲ್ಲಿ ಭಾರತೀಯ ಮಾಧ್ಯಮಗಳಿಂದ ನಿಖರ ವರದಿಗಾರಿಕೆಯ ಅಗತ್ಯದ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News