ಇಂಟರ್‌ನೆಟ್ ಸ್ಥಗಿತದಿಂದಾಗಿ 80 ದಿನಗಳಿಂದ ಕುಂಟುತ್ತಿರುವ ಮಣಿಪುರ: ಆನ್‌ಲೈನ್ ತರಗತಿ, ಎಲ್ಲ ಬಗೆಯ ವಹಿವಾಟು ಸ್ಥಗಿತ
ಇಂಫಾಲ: ಈವರೆಗೆ 100 ಮಂದಿಯನ್ನು ಬಲಿ ತೆಗೆದುಕೊಂಡಿರುವ ಜನಾಂಗೀಯ ಸಂಘರ್ಷದ ಕಾರಣಕ್ಕೆ ಮಣಿಪುರದಲ್ಲಿ ಅಂತರ್ಜಾಲ ಸೇವೆ ಅಮಾನತುಗೊಂಡು ಇಂದಿಗೆ 80 ದಿನಗಳಾಗಿವೆ. ಅಂತರ್ಜಾಲ ಸ್ಥಗಿತದಿಂದ ಇಲ್ಲಿನ ಜನರ ಹೊರಜಗತ್ತಿನ ಸಂಪರ್ಕ ಮಾತ್ರ ಕಡಿತಗೊಂಡಿಲ್ಲ; ಬದಲಿಗೆ ಅವರ ದೈನಂದಿನ ಬದುಕೂ ಹಳಿ ತಪ್ಪಿದೆ ಎಂದು indiatoday.in ವರದಿ ಮಾಡಿದೆ.
ಇಂಫಾಲದ ಹತ್ತನೇ ತರಗತಿಯ ವಿದ್ಯಾರ್ಥಿ ಖಾಂಗೆಂಬಮ್ ಡೈಮಂಡ್‌ಸನಾ ಸಿಂಗ್ ಪ್ರಕಾರ, ಮಣಿಪುರದಲ್ಲಿ ಅಂತರ್ಜಾಲ ಸೇವೆ ಲಭ್ಯವಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಲಭ್ಯವಿದ್ದ ಆನ್‌ಲೈನ್ ತರಗತಿ ಅಥವಾ ಪಠ್ಯಗಳಂಥ ಯಾವುದೇ ಬಗೆಯ ವಿದ್ಯಾರ್ಥಿ ಚಟುವಟಿಕೆಗಳಿಗೆ ನಮಗೆ ಸಾಧ್ಯವಾಗುತ್ತಿಲ್ಲ. ನಾನು ಸಿಬಿಎಸ್‌ಇ ಪರೀಕ್ಷೆಗೆ ಹಾಜರಾಗಬೇಕಿರುವುದರಿಂದ ಅಂತರ್ಜಾಲ ಸೌಲಭ್ಯವನ್ನು ಎಷ್ಟು ಶೀಘ್ರ ಸಾಧ್ಯವೊ, ಅಷ್ಟು ಶೀಘ್ರ ಪುನರ್ ಸ್ಥಾಪಿಸಬೇಕು ಎಂದು ಬಯಸುತ್ತೇವೆ. ಮಂಡಳಿ ಪರೀಕ್ಷೆಗೆ ಹಾಜರಾಗಲಿರುವವರ ಪರವಾಗಿ ಸರ್ಕಾರ ಒಂದು ನಿರ್ಧಾರ ಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ" ಎಂದು ಹೇಳಿದ್ದಾರೆ.
ಈ ನಡುವೆ, ಯಾವಾಗಲೂ ನೇರವಾಗಿ ಮಾಹಿತಿ ಪಡೆಯುವುದು ಕ್ಲಿಷ್ಟಕರವಾಗಿದ್ದಾಗಲೇ, ಅಂತರ್ಜಾಲ ಸೇವೆಯನ್ನು ಅಮಾನತುಗೊಳಿಸಿರುವುದು ಆರೋಗ್ಯ ಸೇವೆ ಹಾಗೂ ಆರ್ಥಿಕ ಸೇವೆಗಳ ಮೇಲೆ ಗಂಭೀರ ದುಷ್ಪರಿಣಾಮವನ್ನುಂಟು ಮಾಡಿದೆ. ರಾಜಧಾನಿ ಇಂಫಾಲದಲ್ಲಾಗಲಿ ಅಥವಾ ಗಿರಿಶ್ರೇಣಿಗಳಲ್ಲಾಗಲಿ ಆನ್‌ಲೈನ್ ವಹಿವಾಟಿಗೆ ಅನುಮತಿ ನೀಡಲಾಗಿಲ್ಲ. ನಗದು ವಹಿವಾಟು ಒಂದೇ ಉಳಿದಿರುವ ಏಕೈಕ ಮಾರ್ಗವಾಗಿರುವಾಗ, ಖಾಲಿ ಎಟಿಎಂಗಳು ಹಾಗೂ ಸೀಮಿತ ಬ್ಯಾಂಕ್ ವ್ಯವಹಾರದ ಅವಧಿಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
ಹೀಗಿದ್ದೂ, ಮಣಿಪುರದಲ್ಲಿನ ಮಾಧ್ಯಮ ಸಂಸ್ಥೆಗಳಿಗೆ ಅಂತರ್ಜಾಲ ಸೇವೆ ಪಡೆಯಲು ಅವಕಾಶವಿದ್ದರೂ, ಅದರಿಂದ ಸಾಮಾನ್ಯ ಜನರಿಗೆ ಯಾವುದೇ ಉಪಯೋಗವಿಲ್ಲ.