ಮುಕೇಶ್ ಅಂಬಾನಿ ಪುತ್ರನ ಮದುವೆ ಹಿನ್ನಲೆ: 10 ದಿನಗಳ ಕಾಲ ಜಾಮ್ನಗರ್ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಏರ್‌ಪೋರ್ಟ್ ಸ್ಥಾನಮಾನ
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಸಮಾರಂಭಕ್ಕೆ ಜಾಗತಿಕ ಮಟ್ಟದ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಜಾಮ್ನಗರ್ ವಿಮಾನ ನಿಲ್ದಾಣವನ್ನು 10 ದಿನಗಳ ಮಟ್ಟಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲಾಗಿದೆ ಎಂದು thehindu.com ವರದಿ ಮಾಡಿದೆ.
ಮಾರ್ಚ್ 1ರಂದು ಆರಂಭಗೊಂಡಿರುವ ವಿವಾಹ ಸಂಬಂಧಿ ಆಚರಣೆಗಳು ಮೂರು ದಿನಗಳ ಕಾಲ ನಡೆಯಲಿದ್ದು ಗಣ್ಯರಾದ ಬಿಲ್ ಗೇಟ್ಸ್, ಮಾರ್ಕ್ ಝುಕರ್ ಬರ್ಗ್, ಗಾಯಕಿ ರಿಹಾನ, ಇವಾಂಕ ಟ್ರಂಪ್ ಮುಂತಾದವರು ಆಗಮಿಸಿದ್ದಾರೆ.
ಜಾಮ್ನಗರ್ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 25ರಿಂದ ಮಾರ್ಚ್ 5ರ ತನಕ ಅಂತರರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಇಲ್ಲಿ ಕಸ್ಟಮ್ಸ್, ಇಮಿಗ್ರೇಶನ್ ಮತ್ತು ಕ್ವಾರಂಟೈನ್ ಸೌಲಭ್ಯಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗಳು ಕ್ರಮಕೈಗೊಂಡಿವೆ.
ಜಾಮ್ನಗರ್ ವಿಮಾನ ನಿಲ್ದಾಣವು ಡಿಫೆನ್ಸ್ ವಿಮಾನ ನಿಲ್ದಾಣವಾಗಿದ್ದು ಇಲ್ಲಿ ವಾಣಿಜ್ಯ ವಿಮಾಣಗಳಿಗೆ ಅದಾಗಲೇ ಅನುಮತಿಯಿದೆ. ಇದಕ್ಕಾಗಿ ಅಲ್ಲಿ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡವಿದೆ. ಆದರೆ ಅನಂತ್ ಅಂಬಾನಿ ವಿವಾಹ ನಿಮಿತ್ತ ಭಾರತೀಯ ವಾಯು ಪಡೆ ತನ್ನ ಸೂಕ್ಷ್ಮ ತಾಂತ್ರಿಕ ಪ್ರದೇಶಕ್ಕೂ ಪ್ರವೇಶಾವಕಾಶ ನೀಡಿದೆ. ಇಲ್ಲಿ ಏಕಕಾಲದಲ್ಲಿ ಮೂರರಷ್ಟು ವಿಮಾನಗಳನ್ನು ನಿಲ್ಲಿಸಬಹುದಾಗಿದೆ ಎಂದು ತಿಳಿದು ಬಂದಿದೆ.
ವಿವಾಹ ಕಾರ್ಯಕ್ರಮಕ್ಕೆ ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ, ಸೌದಿ ಅರಾಂಕೋ ಅಧ್ಯಕ್ಷ ಯಾಸಿರ್ ಅಲ್ ರುಮಯ್ಯನ್., ಡಿಸ್ನಿ ಸಿಇಒ ಬಾಬ್ ಐಗರ್, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ಡ್, ಭಾರತೀಯ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಧೋನಿ, ದೀಪಿಕಾ ಪಡುಕೋಣೆ ಮತ್ತಿತರರು ಭಾಗವಹಿಸಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದ್ದು, ಇಲ್ಲಿನ ಹೌಸ್‌ಕೀಪಿಂಗ್ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ, ವಿಮಾನ ನಿಲ್ದಾಣದ ಶೌಚಾಲಯಗಳನ್ನು ನವೀಕರಿಸಲಾಗಿದೆ ಮತ್ತು ಬಣ್ಣ ಹಚ್ಚಲಾಗಿದೆ.
ವಿದೇಶಗಳಿಂದ ಖಾಸಗಿ ಜೆಟ್‌ಗಳಲ್ಲಿ ಹಲವು ಗಣ್ಯರು ಆಗಮಿಸಲಿದ್ದರೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಮೂರು 180 ಆಸನಗಳ ಬೋಯಿಂಗ್ 737 ವಿಮಾನಗಳ ಒಟ್ಟು 18 ಹಾರಾಟ ನಡೆಸಲಿದೆ, ಬೆಂಗಳೂರು ಮೂಲದ ಸ್ಟಾರ್ ಏರ್ ತನ್ನ 76 ಆಸನಗಳ ಎಂಬ್ರೇರ್ ಇ175 ವಿಮಾನಗಳನ್ನೂ ಬಳಸಲಿದೆ.
ಅಂತರರಾಷ್ಟ್ರೀಯ ಖಾದ್ಯಗಳನ್ನು ತರಿಸಲು ಸ್ಪೈಸ್ ಜೆಟ್ ಫೆಬ್ರವರಿ 26ರಂದು ಕಾರ್ಗೊ ವಿಮಾನ ಹಾರಾಟ ನಡೆಸಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಾಮಾನ್ಯ ವಾಣಿಜ್ಯ ಪ್ಯಾಸೆಂಜರ್ ವಿಮಾನ ಸೇವೆಗಳು ಜಾಮ್ನಗರ್ ವಿಮಾನ ನಿಲ್ದಾನದಲ್ಲಿ ಅಬಾಧಿತವಾಗಿದೆ.