ಸಿಗರೇಟಿನ ತುಂಡಿನಿಂದ ಕಾಣಿಸಿಕೊಂಡ ಬೆಂಕಿಯಿಂದ ದಿಲ್ಲಿ CRPF ಶಾಲೆ ಬಳಿ ಸ್ಪೋಟ? : ವರದಿ
ಹೊಸದಿಲ್ಲಿ : ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿನ CRPF ಶಾಲೆಯ ಬಳಿ ಸಂಭವಿಸಿದ ಸ್ಪೋಟ ಪ್ರಕರಣದ ಕುರಿತು ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿದ್ದರು. ಇದೀಗ ವ್ಯಕ್ತಿಯೋರ್ವ ಸೇದಿ ಎಸೆದ ಸಿಗರೇಟಿನಿಂದ ಬೆಂಕಿ ಕಾಣಿಸಿಕೊಂಡು ಕೈಗಾರಿಕಾ ತ್ಯಾಜ್ಯ ಸ್ಪೋಟವಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.
ದಿಲ್ಲಿಯ ರೋಹಿಣಿಯಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೋರ್ವ ಸಿಗರೇಟು ಸೇದಿ ಅದರ ಬಿಡಿ ಭಾಗವನ್ನು ಕಸದ ರಾಶಿಗೆ ಎಸೆದಿದ್ದಾನೆ. ಇದರಿಂದಾಗಿ ಅಲ್ಲಿದ್ದ ಕೈಗಾರಿಕಾ ತ್ಯಾಜ್ಯಕ್ಕೆ ಬೆಂಕಿ ಆವರಿಸಿ ಸ್ಪೋಟ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು THE INDIAN EXPRESS ವರದಿ ಮಾಡಿದೆ.
ವಿಧಿವಿಜ್ಞಾನ ತಜ್ಞರು ಮತ್ತು ತಾಂತ್ರಿಕ ತಜ್ಞರು ಈ ಕುರಿತು ದಿಲ್ಲಿ ಪೊಲೀಸರ ಜೊತೆ ಸಮಾಲೋಚಿಸಿದ್ದಾರೆ. ಆದರೆ ಅವರು ಈ ಕುರಿತು ಇನ್ನೂ ತಮ್ಮ ವರದಿಯನ್ನು ಸಲ್ಲಿಸಿಲ್ಲ. ಸದ್ಯಕ್ಕೆ ಆ ಸ್ಥಳದಲ್ಲಿ ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 20ರಂದು ದಿಲ್ಲಿಯ ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿನ CRPF ಶಾಲೆ ಬಳಿ ಸ್ಪೋಟ ಸಂಭವಿಸಿತ್ತು. ಸ್ಫೋಟದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲದಿದ್ದರೂ, ಪಕ್ಕದಲ್ಲಿನ ಅಂಗಡಿಗಳ ಹೋರ್ಡಿಂಗ್ ಗಳು ಮತ್ತು ಆ ಪ್ರದೇಶದಲ್ಲಿ ನಿಲ್ಲಿಸಿದ್ದ ಕೆಲವು ವಾಹನಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
ಪೊಲೀಸರು ಪ್ರಕರಣದ ತನಿಖೆಯ ವೇಳೆ ಹಲವರನ್ನು ವಿಚಾರಣೆ ನಡೆಸಿದ್ದಾರೆ. 10 ಶಂಕಿತರ ಪೈಕಿ ಉತ್ತರ ದಿಲ್ಲಿ ಮೂಲದ ಉದ್ಯಮಿಯೊಬ್ಬರು ಸ್ಫೋಟಕ್ಕೆ ಐದು ನಿಮಿಷಗಳ ಮೊದಲು ಅಲ್ಲಿ ನಡೆದಾಡುವುದನ್ನು ಗಮನಿಸಿದ್ದಾರೆ. ಈತ ಪ್ರಶಾಂತ್ ವಿಹಾರ್ ನಿವಾಸಿಯಾಗಿದ್ದು, ರವಿವಾರ ಬೆಳಿಗ್ಗೆ ತನ್ನ ನಾಯಿಯ ಜೊತೆ ವಾಕಿಂಗ್ ಗೆ ಬಂದಿದ್ದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರು ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಸಿಗರೇಟ್ ತುಂಡುಗಳನ್ನು ಎಸೆದಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.