ದಿಲ್ಲಿಯ ಶೇ. 69 ಕುಟುಂಬಗಳು ಮಾಲಿನ್ಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿವೆ : ಸಮೀಕ್ಷೆ

Update: 2024-11-02 06:39 GMT

Photo : Indiatoday.in

ಹೊಸದಿಲ್ಲಿ : ದಿಲ್ಲಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಕಳಪೆಯಾಗಿದ್ದು, 69% ಕುಟುಂಬಗಳ ಕನಿಷ್ಠ ಒಬ್ಬ ಸದಸ್ಯರಿಗೆ ಗಂಟಲು ನೋವು, ಕೆಮ್ಮು ಸೇರಿದಂತೆ ಮಾಲಿನ್ಯ ಸಂಬಂಧಿತ ಕಾಯಿಲೆಗಳಿವೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.

ದಿಲ್ಲಿಯಲ್ಲಿ ದೀಪಾವಳಿ ದಿನ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ಡಿಜಿಟಲ್ ಪ್ಲಾಟ್ಫಾರ್ಮ್ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು ದಿಲ್ಲಿಯಲ್ಲಿ 21,000ಕ್ಕೂ ಹೆಚ್ಚು ನಿವಾಸಿಗಳಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಸಮೀಕ್ಷೆಯು ಈ ಪ್ರದೇಶದ ಜನರ ಮೇಲೆ ವಾಯು ಮಾಲಿನ್ಯ ವ್ಯಾಪಕ ಪರಿಣಾಮಗಳನ್ನು ಬೀರಿರುವುದನ್ನು ಬಹಿರಂಗಪಡಿಸಿದೆ.

ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ 62% ಕುಟುಂಬಗಳ ಒಬ್ಬ ಅಥವಾ ಹೆಚ್ಚಿನ ಸದಸ್ಯರು ಕಣ್ಣು ಉರಿ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 31% ಜನರು ಉಸಿರಾಟದ ತೊಂದರೆ, ಆಸ್ತಮಾ, ತಲೆನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸುಮಾರು 23% ಜನರು ಆತಂಕ ಮತ್ತು ಏಕಾಗ್ರತೆ ಕುರಿತ ತೊಂದರೆಗಳನ್ನು ಅನುಭವಿಸಿದ್ದಾರೆ. 15 ಪ್ರತಿಶತದಷ್ಟು ಜನರು ನಿದ್ರಾಹೀನತೆ ಅನುಭವಿಸಿದ್ದಾರೆ.

ಅನೇಕರು ಈಗಾಗಲೇ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದಾರೆ ಮತ್ತು ಕೆಲವರು ಈಗಾಗಲೇ ಅಸ್ತಮಾ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯನ್ನು ಎದುರಿಸುತ್ತಿದ್ದಾರೆ. ದೀಪಾವಳಿಯ ನಂತರ ಈ ಸ್ಥಿತಿ ಮತ್ತಷ್ಟು ತೀವ್ರವಾಗಲಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ವೇಳೆ ದಿಲ್ಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದ ಬೀರುವ ಪ್ರಭಾವದಿಂದ ಪಾರಾಗಲು ಏನು ಮಾಡುತ್ತಿದ್ದೀರಿ ಎಂದು ಕೇಳಲಾಗಿದೆ. ಈ ಬಗ್ಗೆ 10,630 ಮಂದಿ ಪ್ರತಿಕ್ರಿಯಿಸಿದವರಲ್ಲಿ 15 ಪ್ರತಿಶತ ಜನರು ಈ ಅವಧಿಯಲ್ಲಿ ನಗರವನ್ನು ತೊರೆಯಲು ಯೋಚಿಸಿರುವುದಾಗಿ ಹೇಳಿದ್ದಾರೆ. 9% ಜನರು ಮನೆಯೊಳಗೆ ಇರುವುದಾಗಿ ಹೇಳಿದ್ದು, 23% ಜನರು

ಮನೆಯೊಳಗೆ ಇದ್ದುಕೊಂಡು ಗಾಳಿ ಶುದ್ದೀಕರಣ ಸಾಧನಗಳನ್ನು ಬಳಸುವುದಾಗಿ ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News