ಜಾರ್ಖಂಡ್: ಎರಡೂ ಮಿತ್ರ ಕೂಟಗಳಿಗೆ ಸೀಟು ಹಂಚಿಕೆ ಸವಾಲು

Update: 2024-10-16 04:27 GMT

ಹೇಮಂತ್‌ ಸೊರೇನ್‌ ( PTI)

ರಾಂಚಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಜತೆಗೆ ಜಾರ್ಖಂಡ್ ವಿಧಾನಸಭಾ ಚುನಾವಣೆಯನ್ನೂ ಘೋಷಿಸಿದ ಚುನಾವಣಾ ಆಯೋಗದ ಕ್ರಮವನ್ನು ಇಂಡಿಯಾ ಮೈತ್ರಿಕೂಟ ಟೀಕಿಸಿದೆ. ಆದರೆ ಚುನಾವಣೆ ದಿನಾಂಕ ಘೋಷಣೆಯನ್ನು ಸ್ವಾಗತಿಸಿದ ಬಿಜೆಪಿ ನೇತೃತ್ವದ ಎನ್ ಡಿಎ ವಿರುದ್ಧದ ಹೋರಾಟಕ್ಕೆ ಸಿದ್ಧ ಎಂದು ಸ್ಪಷ್ಟಪಡಿಸಿದೆ.

ಮುಂದಿನ ವರ್ಷದ ಜನವರಿ ಕೊನೆಯವರೆಗೂ ರಾಜ್ಯ ವಿಧಾನಸಭೆಯ ಅಧಿಕಾರಾವಧಿ ಇದ್ದರೂ, ಚುನಾವಣಾ ದಿನಾಂಕವನ್ನು ಘೋಷಿಸಿದ ಕ್ರಮ ಆತುರದ ನಿರ್ಧಾರ ಎಂದು ಜೆಎಂಎಂ, ಕಾಂಗ್ರೆಸ್ ಮತ್ತು ಸಿಪಿಐ(ಎಂಎಲ್-ಎಲ್) ಟೀಕಿಸಿವೆ.

ಸಿಇಸಿ ಮತ್ತು ಇತರ ಪ್ರತಿನಿಧಿಗಳ ಜತೆ ಸಭೆ ನಡೆಸಿ, ನವೆಂಬರ್ 15ರ ರಾಜ್ಯ ಸಂಸ್ಥಾಪನೆ ದಿನದ ಬಳಿಕ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದೆವು. ನವರಾತ್ರಿ ಈಗಷ್ಟೇ ಮುಗಿದಿದ್ದು, ದೀಪಾವಳಿ ಮತ್ತು ಛತ್ ಹೀಗೆ ಎರಡು ಅತಿದೊಡ್ಡ ಹಬ್ಬಗಳು ಈ ಚುನಾವಣೆಗೆ ಮುನ್ನ ನಡೆಯಲಿವೆ. ಮತದಾರರಿಗೆ ಇದು ತೀವ್ರ ಅನಾನುಕೂಲ ತಂದೊಡ್ಡಿದೆ" ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ವಿನೋದ್ ಕುಮಾರ್ ಪಾಂಡೆ ಹೇಳಿದ್ದಾರೆ. ಆದರೆ ಮತ ಸಮರಕ್ಕೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ದಿಢೀರ್ ಚುನಾವಣಾ ಘೋಷಣೆ ಎರಡೂ ಮಿತ್ರಕೂಟಗಳಿಗೆ ಸವಾಲು ತಂದೊಡ್ಡಿದೆ. ಎನ್ ಡಿಎ ಪಾಳಯದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಎಜೆಎಸ್ ಯು-ಪಿ ಒಂಬತ್ತು ಸ್ಥಾನಗಳಿಗೆ ಬೇಡಿಕೆ ಮುಂದಿಟ್ಟಿದೆ. ಅಂತೆಯೇ ಎಲ್ ಜಿಪಿ (ರಾಮ್ ವಿಲಾಸ್) ಮತ್ತು ಜಿತಾನ್ ರಾಮ್ ಮಾಂಝಿಯವರ ಎಚ್ ಎಎಂ ಕೂಡಾ ಸ್ಥಾನಗಳಿಗೆ ಬೇಡಿಕೆ ಇಟ್ಟಿವೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಜೆಮ್ಶೇಡ್ಪುರ (ಪೂರ್ವ) ಮತ್ತು ತಮರ್ ಸ್ಥಾನಗಳಿಂದ ಕಣಕ್ಕಿಳಿಯಲು ಉತ್ಸುಕವಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.

ಇತ್ತ ಇಂಡಿಯಾ ಕೂಟದಲ್ಲೂ ಸ್ಥಾನ ಹೊಂದಾಣಿಕೆ ದೊಡ್ಡ ಸವಾಲಾಗಿದ್ದು, 2019ರ ಚುನಾವಣೆಯಲ್ಲಿ 81 ಸ್ಥಾನಗಳ ಪೈಕಿ ಜೆಎಂಎಂ 43ರಲ್ಲಿ ಸ್ಪರ್ಧಿಸಿತ್ತು. ಈ ಪಕ್ಷ ದೊಡ್ಡ ಸಂಖ್ಯೆಯ ಸ್ಥಾನಗಳ ನಿರೀಕ್ಷೆಯಲ್ಲಿದೆ. ಎರಡನೇ ಅತಿದೊಡ್ಡ ಘಟಕ ಪಕ್ಷವಾಗಿರುವ ಕಾಂಗ್ರೆಸ್ ತನ್ನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಆಗ್ರಹಿಸಿದೆ. 2019ರಲ್ಲಿ 31 ಸ್ಥಾನಗಳಲ್ಲಿ ಸ್ಪರ್ಧಿಸಿದ್ದೆವು. ಈ ಬಾರಿ ಪೊರಿಯಾಹಾತ್ ಮತ್ತು ಮಂಡು ನಮ್ಮ ಬುಟ್ಟಿಗೆ ಬಂದಿರುವುದರಿಂದ 33 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಏಳು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆರ್ ಜೆಡಿ 10 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 2019ರಲ್ಲಿ ಮಹಾಘಟಬಂಧನದ ಭಾಗವಾಗಿ ಇರದ ಎಡಪಕ್ಷಗಳು ಕನಿಷ್ಠ ಆರು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News