ಜಾರ್ಖಂಡ್ ನಲ್ಲಿ ಇಂದು ಎರಡನೇ ಹಂತದ ಮತದಾನ: 9 ಗಂಟೆ ವೇಳೆಗೆ 12.71% ಮತದಾನ ದಾಖಲು
ರಾಂಚಿ: ಜಾರ್ಖಂಡ್ ವಿಧಾನಸಭೆಗೆ ಎರಡನೇ ಮತ್ತು ಅಂತಿಮ ಹಂತದ ಮತದಾನದ ಹಿನ್ನೆಲೆ 38 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ನಡುವೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 9ಗಂಟೆ ವೇಳೆಗೆ 12.71% ಮತದಾನ ದಾಖಲಾಗಿದೆ.
ಜಾರ್ಖಂಡ್ ನ 12 ಜಿಲ್ಲೆಗಳ 14,218 ಬೂತ್ ಗಳಲ್ಲಿ ಬೆಳಿಗ್ಗೆ 7ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ. ಎರಡನೇ ಹಂತದಲ್ಲಿ 60.79ಲಕ್ಷ ಮಹಿಳೆಯರು ಮತ್ತು 147ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 1.23 ಕೋಟಿ ಮತದಾರರು ಬುಧವಾರ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ, ಜೆಎಂಎಂ ನಾಯಕ ಹೇಮಂತ್ ಸೊರೆನ್, ಅವರ ಪತ್ನಿ ಕಲ್ಪನಾ ಸೊರೆನ್ ಮತ್ತು ಬಿಜೆಪಿಯ ವಿರೋಧ ಪಕ್ಷದ ನಾಯಕ ಅಮರ್ ಕುಮಾರ್ ಬೌರಿ ಸೇರಿದಂತೆ ಒಟ್ಟು 528 ಅಭ್ಯರ್ಥಿಗಳು ಎರಡನೇ ಹಂತದ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಜಾರ್ಖಂಡ್ ನಲ್ಲಿ ನವೆಂಬರ್ 13ರಂದು ಮೊದಲ ಹಂತದ ಚುನಾವಣೆ ನಡೆದಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.