ಸರ್ಕಾರಿ ಯೋಜನೆ ಕುರಿತು ಸುಳ್ಳು ಸುದ್ದಿ ಹರಡಿದ ಪ್ರಕರಣ: ಎಫ್‌ಐಆರ್ ದಾಖಲಾಗುತ್ತಿದ್ದಂತೆ ವಿಡಿಯೋ ಡಿಲೀಟ್
ಬೆಂಗಳೂರು: ಅಲ್ಪಸಂಖ್ಯಾತರು, ಪರಿಶಿಷ್ಟ/ಜಾತಿ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಿಗಾಗಿ ಇರುವ ವಾಣಿಜ್ಯ ವಾಹನ ಸಬ್ಸಿಡಿ ಯೋಜನೆ ಕುರಿತು ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಆಜ್ ತಕ್ ವಾಹಿನಿಯ ಪ್ರಧಾನ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಕರ್ನಾಟಕ ಪೊಲೀಸರು ಸೆಪ್ಟೆಂಬರ್ 12, ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿ ಶಿವಕುಮಾರ್ ಎಸ್ ಎಂಬವರು ದಾಖಲಿಸಿದ ದೂರಿನ ಆಧಾರದಲ್ಲಿ ಈ ಎಫ್ಐಆರ್ ದಾಖಲಾಗಿದೆ. ಚೌಧರಿ ಮತ್ತು ಆಜ್ ತಕ್ ವಿರುದ್ಧ ಐಪಿಸಿ ಸೆಕ್ಷನ್ 505 ಮತ್ತು 153ಎ ಅನ್ವಯ ಪ್ರಕರಣ ದಾಖಲಾಗಿದೆ.
ಎಫ್ಐಆರ್ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಿಂದ ತಪ್ಪು ಮಾಹಿತಿಯ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 11ರಂದು ಚೌಧುರಿ ಪ್ರಸ್ತುತ ಪಡಿಸಿದ ಕಾರ್ಯಕ್ರಮವೊಂದು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಾಹೀರಾತೊಂದರತ್ತ ಬೆಳಕು ಚೆಲ್ಲಿತ್ತು. ವಾಣಿಜ್ಯ ವಾಹನಗಳ ಖರೀದಿಗಾಗಿ ವಾರ್ಷಿಕ ರೂ 4.5 ಲಕ್ಷಕ್ಕಿಂತ ಲಡಿಮೆ ಆದಾಯ ಹೊಂದಿದ ಧಾರ್ಮಿಕ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಜನರಿಗೆ ರೂ 3 ಲಕ್ಷದ ತನಕ ಶೇ50 ಸಬ್ಸಿಡಿ ನೀಡುವ ಯೋಜನೆಯ ಕುರಿತ ಜಾಹೀರಾತು ಅದಾಗಿತ್ತು.
ಆದರೆ ಈ ಯೋಜನೆ ತಾರತಮ್ಯಕಾರಿ ಮತ್ತು ಈ ಯೋಜನೆ ಹಿಂದೂಗಳಿಗೆ ಲಭ್ಯವಿಲ್ಲ ಎಂದು ಸುಧೀರ್ ಚೌಧರಿ ಅವರು ತಮ್ಮ ಶೋದಲ್ಲಿ ಹೇಳಿಕೊಂಡಿದ್ದರು. ಆದರೆ ಇದೇ ಪ್ರಯೋಜನವನ್ನು ಪರಿಶಿಷ್ಟ ಜಾತಿ ಪಂಗಡಗಳ ಸದಸ್ಯರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಐರಾವತ ಯೋಜನೆಯಡಿ ಪಡೆಯಬಹುದು ಮತ್ತು ಹಿಂದುಳಿದ ವರ್ಗಗಳು ರಾಜ್ಯ ಸರ್ಕಾರದಿಂದ ಪಡೆಯಬಹುದು ಎಂಬುದನ್ನು ಈ ಶೋ ಹೇಳಿಲ್ಲ.
“ಇದೇ ಯೋಜನೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ವರ್ಗದವರು ಮತ್ತು ಹಿಂದುಳಿದ ವರ್ಗಗಳವರಿಗೆ ಲಭ್ಯವಿದೆ,” ಎಂದು ರಾಜ್ಯದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಮೂರೂ ಯೋಜನೆಗಳು ಜುಲೈ 2023ರ ಕರ್ನಾಟಕ ಬಜೆಟಿನಲ್ಲಿ ಉಲ್ಲೇಖಿಸಲಾಗಿತ್ತು. ಸ್ವಾವಲಂಬಿ ಸಾರಥಿ ಎಂಬ ವಾಹನ ಸಬ್ಸಿಡಿ ಯೋಜನೆಯಡಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ವರ್ಗದವರು ಮತ್ತು ಹಿಂದುಳಿದ ವರ್ಗಗಳವರು ಪ್ರಯೋಜನ ಪಡೆಯಬಹುದು ಎಂದು ಬಜೆಟ್ ಹೇಳಿತ್ತು.
“ಈ ಯೋಜನೆ ಹಿಂದುಗಳಿಗಲ್ಲ” ಎಂದು ಹೇಳುವ ಮೂಲಕ ಚೌಧುರಿ ಅವರು ಯೋಜನೆಗೆ ಮತೀಯ ಬಣ್ಣ ನೀಡಲು ಚೌಧರಿ ಯತ್ನಿಸಿದ್ದರು.
“ವಾಹನ ಖರೀದಿಸಲು ನಿಮಗೆ ಸಬ್ಸಿಡಿ ದೊರೆಯುವುದಿಲ್ಲ ಎಂದು ಹೇಳುವ ಪ್ರಯತ್ನ ಕರ್ನಾಟಕ ಸರ್ಕಾರ ಮಾಡುತ್ತಿದೆ. ಆದರೆ ಮುಸ್ಲಿಮರು, ಸಿಖರು, ಬೌದ್ಧರು ವಾಹನ ಖರೀದಿಗೆ ಸಬ್ಸಿಡಿ ಪಡೆಯಬಹುದು,” ಎಂದು ಚೌಧುರಿ ತಮ್ಮ ಶೋದಲ್ಲಿ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ಉದ್ದೇಶಪೂರ್ವಕವಾಗಿ ತಪ್ಪು ದಾರಿಗೆಳೆಯುವ ಹೇಳಿಕೆ ನೀಡಿದ್ದಕ್ಕೆ” ಚೌಧರಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದಿದ್ದರು.
ಕಾರ್ಯಕ್ರಮದ ವಿಡಿಯೋ ಡಿಲೀಟ್
ಕರ್ನಾಟಕದಲ್ಲಿ ಎಫ್ಐಆರ್ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಿಂದ ತಪ್ಪು ಮಾಹಿತಿಯ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಎಫ್ಐಆರ್ ದಾಖಲಾಗಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸುಧೀರ್ ಚೌಧರಿ, ‘ಪ್ರಶ್ನಿಸಿದ್ದಕ್ಕೆ ಎಫ್ಐಆರ್ ಹಾಕಲಾಗಿದೆ’ಎಂದು ಹೇಳಿಕೊಂಡಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ಎಫ್‌ಐಆರ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಶ್ನೆ ಮಾಡಿದ್ದಕ್ಕೆ ಅದೂ ಜಾಮೀನು ರಹಿತ ಸೆಕ್ಷನ್‌ಗಳೊಂದಿಗೆ ಎಫ್‌ಐಆರ್ ದಾಖಲಿಸುವುದು ಉತ್ತರವೇ? ನನ್ನ ಬಂಧನಕ್ಕೆ ಸಂಪೂರ್ಣ ಸಿದ್ಧತೆ ಮಾಡಲಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಹಿಂದೂ ಸಮುದಾಯವನ್ನು ಏಕೆ ಸೇರಿಸಿಲ್ಲ ಎಂಬುದು ನನ್ನ ಪ್ರಶ್ನೆಯಾಗಿತ್ತು? ಎಲ್ಲ ರೀತಿಯ ಹೋರಾಟಕ್ಕೂ ನಾನು ಸಿದ್ಧ. ನ್ಯಾಯಾಲಯದಲ್ಲಿ ಎದುರಿಸುತ್ತೇನೆ ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.
ಆದರೆ, ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿರುವ ಬಗ್ಗೆ ಸುಧೀರ್ ಚೌಧರಿಯನ್ನು ನೆಟ್ಟಿಗರು ಪ್ರಶ್ನಿಸಿದ್ದು, ನೀವು ತಪ್ಪು ಮಾಡಿಲ್ಲವಾದರೆ ವಿಡಿಯೋ ಯಾಕೆ ಡಿಲೀಟ್ ಮಾಡಿದ್ದೀರಾ ಎಂದು ಕೇಳಿದ್ದಾರೆ.